ಕಾಂತಾರ ಸಿನೆಮಾದ ಟ್ರೈಲರ್ ನೋಡಿದಾಗಿನಿಂದ ಸಿನೆಮಾ ನೋಡಲೇಬೇಕು ಎಂದು ತೀರ್ಮಾನಿಸಿದ್ದೆ. ನನ್ನ ಜಿಲ್ಲೆಯ ನಮ್ಮ ಸಂಸ್ಕೃತಿಯ ಸೊಬಗನ್ನು ತೆರೆಯ ಮೇಲೆ ಅದ್ಬುತವಾಗಿ ಬಿಂಬಿಸಿದ ರೀತಿಯು ಮಾಡಿದ ಮೋಡಿ ಇದು ಎಂದರೆ ತಪ್ಪಾಗಲಿಕ್ಕಿಲ್ಲ. ಮುಖ್ಯವಾಗಿ ಇಲ್ಲಿನ ಜನರ ಬದುಕಲ್ಲಿ ಹಾಸುಹೊಕ್ಕಾಗಿರುವ ದೈವಾರಾಧನೆ, ಕಂಬಳ ಮೊದಲಾದ ಸಾಂಸ್ಕೃತಿಕ ಆಚರಣೆಗಳು ಟ್ರೈಲರ್ ನಲ್ಲಿ ತುಂಬಾ ಅಧ್ಬುತವಾಗಿ ಮೂಡಿ ಬಂದಿದೆ. ಇದೊಂದು ಸಿನೆಮಾವಲ್ಲ ನಿಜವಾದ ಪ್ರಸಂಗವು ಕಣ್ಣಮುಂದೆ ನಡೆಯುತ್ತಿದೆ ಎನ್ನುವಷ್ಟರ ಮಟ್ಟಿಗೆ ಇದರ ಛಾಯಾಗ್ರಹಣ ಮೂಡಿ ಬಂದಿದೆ. ಹಳ್ಳಿಯ ಜನರ ಬದುಕು, ಕ್ರೀಡೆ, ಜನಾಪದ ಸಂಸ್ಕೃತಿಯ ಸೊಬಗನ್ನು ಕಣ್ಣಿಗೆ ಕಟ್ಟಿದಂತೆ ನಿರ್ದೇಶಕರಾದ ರಿಷಭ್ ಶೆಟ್ಟಿಯವರು ತೆರೆಯ ಮೇಲೆ ತಂದಿದ್ದಾರೆ. ರಿಷಬ್ ಶೆಟ್ಟಿಯವರ ತಿಳಿ ಹಾಸ್ಯದ ಸಂಭಾಷಣೆಗಳು ಕೂಡಾ ಚೆನ್ನಾಗಿ ಮೂಡಿ ಬಂದಿದೆ. ಅವರ ಸಿನೆಮಾಗಳಲ್ಲಿ ಇದೊಂದು ಪ್ಲಸ್ ಪಾಯಿಂಟ್ ಎಂದೇ ಹೇಳಬಹುದು. ಈ ಸಿನೆಮಾದ ಬಗ್ಗೆ ಅನೇಕ ವಿಮರ್ಷೆಗಳನನ್ನು ನೋಡಿದೆ ಮತ್ತು ಫೇಸ್ ಬುಕ್ ವಾಲ್ನಲ್ಲಿ ಓದಿದೆ, ಕೆಲವರು ಸಿನೆಮಾ ನೋಡದೆ ಬರೆದರೆ, ಇನ್ನೂ ಕೆಲವರು ಸಿನೆಮಾವನ್ನು ಸಿನೆಮಾದ ತರಹ ನೋಡದೆ ಅದರಲ್ಲಿ ಲಾಜಿಕ್ ಹುಡುಕುತ್ತಾ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇವೆಲ್ಲದರ ಮಧ್ಯೆ ಸಿನೆಮಾದ ಕಥೆ, ಚಿತ್ರಕಥೆಯನ್ನು ಮೆಚ್ಚಿಕೊಂಡವರ ಸಂಖ್ಯೆಯೇ ಹೆಚ್ಚಿದೆ. ಈಗ ನಾನು ಈ ಬ್ಲಾಗ್ ನಲ್ಲಿ ಕಾಂತಾರ ಸಿನೆಮಾದ ವಿಮರ್ಶೆಯನ್ನು ಮಾಡಲಿದ್ದೇನೆ.
ನನ್ನ ಪ್ರಕಾರ ಈ ಸಿನೆಮಾ ಇಷ್ಟೊಂದು ಯಶಸ್ವಿಯಾಗಲು ಮುಖ್ಯ ಕಾರಣ ಇದರ ಕಥೆಯಲ್ಲಿ ಇರುವ ವಿನೂತನತೆ. ಅದೇ ಹಳೆಯ ಪ್ರೇಮ ಕಥೆಗಳು, ಮಾಸ್ ಸಂಭಾಷಣೆಗಳೇ ತುಂಬಿ ಹೋಗಿದ್ದ ಸಿನೆಮಾಗಳ ಮಧ್ಯೆ, ಉತ್ತಮ ಕಥೆ, ಸಂಭಾಷಣೆ ಇರುವ ಈ ಚಿತ್ರ ಜನರಿಗೆ ಇಷ್ಟವಾಯಿತು. ಈ ಚಿತ್ರದ ಮತ್ತೊಂದು ಮುಖ್ಯ ಅಂಶ ಎಂದರೆ ಅದು ನಟನೆ, ಪ್ರತೀಯೊಬ್ಬರು ತಮ್ಮ ಸಹಜ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಚಿತ್ರ ನೋಡುವಾಗ ಎಲ್ಲೂ ಇದು ಸಿನೆಮಾ ಎಂದೆನಿಸುವುದಿಲ್ಲ ನಮ್ಮ ಮುಂದೆ ನಡೆಯುತ್ತಿರುವ ಘಟನೆ ಎನಿಸುವಷ್ಟು ಸಹಜ ನಟನೆಯನ್ನು ಎಲ್ಲಾ ಪಾತ್ರಧಾರಿಗಳಿಂದ ನಿರ್ದೇಶಕರು ಮಾಡಿಸಿದ್ದಾರೆ.
ಚಿತ್ರದ ಹಾಸ್ಯಗಳೂ ಅಷ್ಟೆ ಸಹಜವಾದ ಸಂಭಾಷಣೆಗಳಲ್ಲಿ ಹಾಸ್ಯವನ್ನು ಬೆರೆಸುವ ಕಲೆಯಲ್ಲಿ ರಿಷಭ್ ಶೆಟ್ಟಿಯವರು ಮತ್ತೇ ಈ ಸಿನೆಮಾದಲ್ಲಿ ಗೆದ್ದಿದ್ದಾರೆ. ಸಿನೆಮಾದ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಒಬ್ಬ ರಾಜ ಸಕಲ ಆಸ್ತಿ-ಪಾಸ್ತಿಗಳನ್ನು ಹೊಂದಿದ್ದರೂ ನೆಮ್ಮದಿಯಿಲ್ಲದೆ ಇರುತ್ತಾನೆ. ಅನೇಕ ಜ್ಯೋತಿಷ್ಯಗಳಿಂದ ಅಭಿಪ್ರಾಯ ಕೇಳಿ ನೆಮ್ಮದಿಯನ್ನು ಕಂಡುಕೊಳ್ಳಲು ಹೊರಟು ಕೊನೆಗೆ ಒಂದು ಕಾಡಿನಲ್ಲಿ ದೇವರ ಕಲ್ಲಿನ ಮುಂದೆ ಶಸ್ತ್ರ ತ್ಯಾಗ ಮಾಡಿ, ಆ ದೈವವನ್ನು ತನ್ನೊಂದಿಗೆ ಕರೆದುಕೊಂಡು ಹೋಗಲು ಬಯಸುತ್ತಾನೆ. ದೈವವು ತಾನು ಬರುವುದಾದರೆ ನನ್ನ ಜನರಿಗೆ ಕಾಡಿನ ಜಾಗವನ್ನು ನೀಡುವಂತೆ ಆದೇಶಿಸುತ್ತದೆ. ಅದರಂತೆ ರಾಜನು ಆ ಜಾಗವನ್ನು ಅಲ್ಲಿನ ಜನರಿಗೆ ದಾನವಾಗಿ ನೀಡುತ್ತಾನೆ. ಹಲವು ವರ್ಷಗಳ ನಂತರ ಆ ರಾಜನ ಕುಟುಂಬದ ಸದಸ್ಯರಲ್ಲೊಬ್ಬ ಈ ಜಾಗದ ಬಗ್ಗೆ ತಕರಾರು ತೆಗೆದು ದೈವದ ಬಳಿ ಪ್ರಶ್ನೆ ಇಟ್ಟು ದೈವದ ನುಡಿಯ ಬಗ್ಗೆ ಅನುಮಾನಿಸಿ ಅದಕ್ಕೆ ತಕ್ಕ ಶಿಕ್ಷೆಯನ್ನು ಪಡೆಯುತ್ತಾನೆ. ಇದಾದ ಹಲವು ವರ್ಷಗಳ ನಂತರ ನಡೆಯುವ ಘಟನೆಗಳು ಸಿನೆಮಾದ ಮುಖ್ಯ ಕಥಾವಸ್ತು. ಈ ವಿನೂತನ ಅಧ್ಬುತ ಕನ್ನಡ ಸಿನೆಮಾವನ್ನು ನೀವು ಒಂದು ಸಾರಿ ನೋಡಲೇ ಬೇಕು. ಈಗ ಈ ಸಿನೆಮಾದ ಹಿಂದಿ, ತೆಲುಗು, ತಮಿಳು ಡಬ್ಬಿಂಗ್ ಕೂಡಾ ಬರಲಿದೆ, ಟ್ರೈಲರ್ ಈಗಾಗಲೇ ರಿಲೀಸ್ ಆಗಿದೆ.
ಕಾಂತಾರ ಪಾತ್ರವರ್ಗ :
ರಿಷಬ್ ಶೆಟ್ಟಿ – ಕಾಡುಬೆಟ್ಟು ಶಿವ, ಸಪ್ತಮಿ ಗೌಡ - ಲೀಲ, ಕಿಶೋರ್ – ಮುರಳೀಧರ ಡಿ.ಆರ್.ಎಫ್.ಒ., ಅಚ್ಯುತ್ ಕುಮಾರ್ –ದೇವೆಂದ್ರ ಸುತ್ತೂರು, ಪ್ರಮೋದ್ ಶೆಟ್ಟಿ - ಸುಧಾಕರ, ಪ್ರಕಾಶ್ ತುಮಿನಾಡ್ – ರಾಂಪ, ಮಾನಸಿ ಸುಧೀರ್ – ಕಮಲ (ಶಿವನ ತಾಯಿ), ನವೀನ್ ಡಿ. ಪಡೀಲ್ - ಲಾಯರ್, ಸ್ವರಾಜ್ ಶೆಟ್ಟಿ – ಗುರುವ ಹಾಗೂ ಇತರರು.
Comments
Post a Comment