ಘೀಳಿಡುತ್ತಾ ಮುಂದೆ ಸಾಗುತ್ತಿರುವ ಸಲಗ | Salaga Movie Review in kannada

 

Salaga Review


ದುನಿಯಾ ವಿಜಯ್ ಅವರು ನಿರ್ದೇಶಿಸಿ, ನಟಿಸಿರುವ ಸಲಗ ಸಿನೆಮಾ ಬಾಕ್ಸ್ ಆಫಿಸನ್ನು ಕೊಳ್ಳೆಹೊಡೆಯುತ್ತಿದೆ. ವರ್ಷಗಳ ನಿರೀಕ್ಷೆಯ ನಂತರ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಕೊರೋನಾ ನಂತರ ಚಿತ್ರ ಮಂದಿರಗಳಲ್ಲಿ ಸಿನೆಮಾ ಪ್ರದರ್ಶನಕ್ಕೆ ಹೊಸ ಹುರುಪು ನೀಡುತ್ತಿದೆ. ಒಳ್ಳೆಯ ಸಿನೆಮಾಗಳನ್ನು ಕನ್ನಡಿಗರು ಯಾವತ್ತೂ ಕೈಬಿಡಲ್ಲ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಆದಿತ್ಯವಾರ ನಾನು ಈ ಸಿನೆಮಾ ನೋಡಿದೆ. ‘ಸಲಗ’ ಬಗ್ಗೆ ನನ್ನ ಅಭಿಪ್ರಾಯವನ್ನು ಈ ಲೇಖನದಲ್ಲಿ ಬರೆಯುತ್ತಿದ್ದೇನೆ. 

ಜೈಲಿನಲ್ಲೇ ಕೂತು ಬೆಂಗಳೂರು ಅಂಡರ್‌ವರ್ಲ್ಡ್ ಆಳುತ್ತಿರುವ ಸಲಗ, ಅವನ ಖದರ್ ಅನ್ನು ತುಂಬಾ ಎಳೆ ಎಳೆಯಾಗಿ ಚಿತ್ರಿಸಲಾಗಿದೆ. ಜೈಲಿಂದ ರಿಲೀಸ್ ಆದ ಮೇಲೂ ಅವನು ಅಂಡರ್ವರ್ಲ್ಡ್ ನ ಕೆಲವರನ್ನು ಟಾರ್ಗೆಟ್ ಮಾಡುತ್ತಾನೆ. ಅದು ಯಾಕೆ ಎಂಬುದನ್ನು ಸಿನೆಮಾ ನೋಡಿಯೇ ಕಂಡುಕೊಳ್ಳಬೇಕು. ನನಗೆ ಸಿನೆಮಾದಲ್ಲಿ ತುಂಬಾ ಇಷ್ಟವಾದ ವಿಷಯ ಏನಪ್ಪ ಅಂದ್ರೆ, ಅದು ಕಾಸ್ಟಿಂಗ್. ಸಿನೆಮಾದಲ್ಲಿ ಬರುವ ಭೂಗತ ಲೋಕದ ರೌಡಿ ಶೀಟರ್‌ಗಳ ಪಾತ್ರಗಳನ್ನು ತುಂಬಾ ಚೆನ್ನಾಗಿ ನಿರ್ವಹಿಸಲಾಗಿದೆ. ಅದರಲ್ಲಿ ಸ್ಲಮ್ ಶೆಟ್ಟಿ, ಕೆಂಡ, ಸೂರಿ ಪಾತ್ರಗಳು ಹಾಗೂ ದುನಿಯಾ ವಿಜಯ್ ಅವರ ಪಾತ್ರ ನಿರ್ವಹಿಸಿದ ಶ್ರೀಧರ್ ಅವರ ಲುಕ್ ವಿಜಯ್ ಅವರಿಗೆ ತುಂಬಾ ಹೋಲಿಕೆಯಾಗುತ್ತದೆ. ಕೆಲ ಪಾತ್ರಗಳು ತುಂಬಾ ನಗು ತರಿಸುತ್ತವೆ ಉದಾಹರಣೆಗೆ “ಸಾವಿತ್ರಿ” ಪಾತ್ರ ಮಾಡಿದ ಕಾಕ್ರೋಚ್ ಸುದಿಯವರ ಪಾತ್ರ. ಹಾಗೆಯೇ ಡಾಲಿ ಧನಂಜಯ್ ಅವರು ಖಡಕ್ ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ದುನಿಯಾ ವಿಜಯ್ ಅವರು ನಿರ್ದೇಶಕರಾಗಿ ಹಾಗೂ ನಟನಾಗಿ ಎರಡೂ ಕಡೆ ಗೆದ್ದಿದ್ದಾರೆ. ಚಿತ್ರದ ನಾಯಕಿಯಾಗಿ ಸಂಜನಾ ಆನಂದ್ ಅವರ ನಟನೆ ತುಂಬಾ ಸಹಜವಾಗಿ ಮೂಡಿಬಂದಿದೆ. ಅವರು ಸಲಗನನ್ನು ಜೈಲಲ್ಲಿ ಭೇಟಿಯಾಗುವ ದೃಶ್ಯ ಅಂತೂ ಸೂಪರ್. ದುನಿಯಾ ವಿಜಯ್ ಅವರು ನಿರ್ದೇಶಕರಾಗಿ ತಮಗಿಂತ ಡಾಲಿ ಧನಂಜಯ್ ಅವರಿಗೇ ಪರದೆಯ ಮೇಲೆ ಹೆಚ್ಚು ಮಹತ್ವ ನೀಡಿದ್ದಾರೆ. ಸಿನೆಮಾ ‘ಎ’ ಸರ್ಟಿಪಿಕೆಟ್ ಇರುವುದರಿಂದ ಹೆಚ್ಚು ಓಡುವುದಿಲ್ಲ ಎಂದು ಕೊಂಡಿದ್ದೆ, ಆದರೆ ಸಿನೆಮಾ ನೋಡಿದ ಮೇಲೆ ಅನ್ನಿಸಿದ್ದು ಒಂದೇ ಈ ಸಿನೆಮಾ ಖಂಡಿತಾ ಗೆಲ್ಲುತ್ತೆ, ಇನ್‌ಫ್ಯಾಕ್ಟ್ ಗೆದ್ದಿದೆ ಎಂದೇ ಹೇಳಬಹುದು. ಒಟ್ಟಿನಲ್ಲಿ ಒಂದು ಒಳ್ಳೆಯ ಕಥೆ, ಚಿತ್ರಕಥೆ, ಸಂಭಾಷಣೆಗಳು ಇರುವ ಈ ಸಿನೆಮಾ ಒಂದು ಸಲ ನೋಡಲೇ ಬೇಕಾದ ಸಿನೆಮಾ ಎಂದರೆ ತಪ್ಪಲ್ಲ. 
ಘೀಳಿಡುತ್ತಾ ಮುಂದೆ ಸಾಗುತ್ತಿರುವ "ಸಲಗ" ವನ್ನು ನೀವು ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಒಮ್ಮೆ ವೀಕ್ಷಿಸಿ.

Comments