ಇಂಟರ್‌ನೆಟ್ ಬಗ್ಗೆ ಒಂದು ವಿಮರ್ಶೆ

 

ಇಂಟರ್ನೆಟ್ ಲೋಕದ ವಿಮರ್ಶೆ


ಅಂತರ್ಜಾಲ ಎಂದರೆ ಜಗತ್ತಿನ ಎಲ್ಲಾ ಗಣಕ ಯಂತ್ರಗಳನ್ನು ಜೋಡಿಸುವ ಒಂದು ಅಗೋಚರ ಕೊಂಡಿ. ಈ ಅಂತರ್ಜಾಲವು ಈಗಿನ ಕಾಲದಲ್ಲಿ ಜನರ ಅತ್ಯವಶ್ಯಕ ವಸ್ತುಗಳ ಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆದುಕೊಂಡಿರುವುದನ್ನು ನಾವು ಅಲ್ಲಗಳೆಯುವಂತಿಲ್ಲ. ಹಿಂದೆ ಒಂದು ಮಾಹಿತಿಯನ್ನು ಇನ್ನೊಂದೆಡೆ ತಲುಪಿಸಲು ಕೆಲ ದಿನಗಳು ಯಾ ವಾರಗಳೇ ಬೇಕಾಗಿದ್ದ ಸಮಯವೂ ಇದ್ದಿತು. ಈಗ ಸೆಕೆಂಡುಗಳ ಅಂತರದಲ್ಲಿ ಒಂದು ಮಾಹಿತಿ ಇನ್ನೊಂದೆಡೆ ತಲುಪುತ್ತೆ ಎಂದರೆ ಅದರ ಶ್ರೆಯ ಈ ಇಂಟರ್ನೆಟ್ ಗೆ ಸೇರಬೇಕು. ಇಂಟರ್ನೆಟ್ ಇಲ್ಲದ ಒಂದು ದಿನವನ್ನು ಊಹಿಸಿ ನೋಡಿದರೆ ಸಾಕು ಅದರ ಮಹತ್ವ ಏನು ಎಂಬುದನ್ನು ತಿಳಿಯಲು. ಇಂಟರ್ನೆಟ್ ನಿಂದ ಎಷ್ಟು ಲಾಭ ಇದೆಯೋ ಅದರ ದುಪಟ್ಟು ನಷ್ಟವೂ ಇದೆ. ಲಾಭ-ನಷ್ಟ ಎನ್ನುವುದಕ್ಕಿಂತ ಧನಾತ್ಮಕ –ಋಣಾತ್ಮಕ ಪರಿಣಾಮಗಳು ಎನ್ನುವುದು ಹೆಚ್ಚು ಸೂಕ್ತ. ಮೊದಲು ಧನಾತ್ಮಕ ವಿಷಯದಿಂದ ಶುರುಮಾಡೋಣ, ನಾನು ಮೊದಲೇ ಹೇಳಿದಂತೆ ಒಂದು ಮಾಹಿತಿಯನ್ನು ಸೆಕೆಂಡುಗಳಲ್ಲಿ ಜಗತ್ತಿನ ಇನ್ನೊಂದು ಮೂಲೆಗೆ ಕಳುಹಿಸಬಹುದು ಎಂದು, ಸಮಯಕ್ಕೆ ಸರಿಯಾಗಿ ಸಿಕ್ಕ ಮಾಹಿತಿಯಿಂದ ಕೆಲವೊಮ್ಮೆ ಅಮೂಲ್ಯ ಜೀವ ಉಳಿಸುವುದು ಸಾಧ್ಯವಾಗಿದೆ. ಹಣ ವರ್ಗಾವಣೆಯನ್ನು ಇನ್ನಷ್ಟು ಸುಲಭವಾಗಿಸಿದೆ. ಎಲ್ಲಾ ಬ್ಯಾಂಕ್ ವ್ಯವಹಾರಗಳು, ವಾಣಿಜ್ಯ ವ್ಯವಹಾರಗಳು ನಾವು ಈ-ಕಾಮರ್ಸ್ ಎಂದು ಕರೆಯುವ ಈ ವ್ಯವಹಾರಗಳಿಗೆ ಮೂಲ ಆಧಾರ ಇಂಟರ್ನೆಟ್. ಆದರೆ ಇದೇ ಇಂಟರ್ನೆಟ್ ನಿಂದ ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಕೂತು ಕೋಟ್ಯಾಂತರ ರೂಪಾಯಿಗಳನ್ನು ಕಳ್ಳತನ ಮಾಡುವವರೂ ಈಗ ಹುಟ್ಟಿಕೊಂಡಿದ್ದಾರೆ. ಅಂಥವರನ್ನು ಸುಲಭವಾಗಿ ಪತ್ತೆ ಮೋಡುವುದು ಅಸಾಧ್ಯ ಎನ್ನುವುದು ದುರದೃಷ್ಟಕರ ಸಂಗತಿ. ಅದಲ್ಲದೆ ಮೊಬೈಲಿಗೆ ಕರೆಮಾಡಿ ನಿಮಗೆ ಲಾಟರಿ ಬಂದಿದೆ ಎಂದೋ, ಅಥವಾ ಬ್ಯಾಂಕಿನಿಂದ ಕರೆ ಮಾಡುವುದಾಗಿ ಹೇಳಿ ಒ.ಟಿ.ಪಿ. ಪಡೆದುಕೊಂಡು ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಮಂಗಮಾಯ ಮಾಡುವವರೂ ಇದ್ದಾರೆ. ಎಷ್ಟೋ ಬಾರಿ ನಿಮ್ಮ ಫೋನಿಗೆ ಲಾಟರಿ ಬಂದಿದೆ ಎಂಬ ಸಂದೇಶ ಬಂದಿರಬಹುದು ಅಲ್ಲವೇ ?? ನನಗೆ ಇಷ್ಟರವರೆಗೆ ಬಂದಿರುವ ಸಂದೇಶಗಳಲ್ಲಿ ನೂರಕ್ಕೆ ಹತ್ತು ಲಾಟರಿಯ ಸಂದೇಶಗಳೇ ಆಗಿವೆ. ಅವುಗಳೆಲ್ಲಾ ಸಿಕ್ಕಿದ್ದಿದ್ದರೆ ಎಂಬ ಹುಚ್ಚು ಯೋಚನೆ ಅನೇಕ ಬಾರಿ ಬಂದದ್ದಿದೆ. ಈ ರೀತಿಯ ಸುಳ್ಳು ಸಂದೇಶಗಳಿಗೆ ಮೋಸ ಹೋದವರ ಬಗ್ಗೆ ನಾವು ದಿನಾ ನ್ಯೂಸ್ ಪೇಪರುಗಳಲ್ಲಿ ಓದುತ್ತೇವೆ ಆದರೂ ಇನ್ನೂ ಜನರು ಇಂತವುಗಳಿಗೆ ಮೋಸ ಹೋಗುತ್ತಿದ್ದಾರೆ ಎಂಬುವುದೇ ವಿಚಿತ್ರ. ಆನ್ಲೈನ್ ಮೋಸಗಳು ಕೇವಲ ಫೊನ್ ಕರೆಗಳಿಂದ ಮಾತ್ರವಲ್ಲ ಕೆಲವೊಂದು ಲಿಂಕ್ ಗಳನ್ನು ಒತ್ತಿ ಎಂಬ ಸಂದೇಶದಿಂದಲೂ ನಡೆಯುತ್ತದೆ. ಕೇವಲ ಒಂದು ಲಿಂಕನ್ನು ಒತ್ತುವುದರಿಂದ ನಿಮ್ಮ ಪೋನನ್ನು ಹ್ಯಾಕ್ ಮಾಡಲು ಸಾದ್ಯವಿದೆ. ಕಂಪ್ಯೂಟರುಗಳಲ್ಲಿ ಕೆಲ ಬ್ರೌಸರುಗಳಲ್ಲಿ ಅಪ್ಡೇಟ್ ಮಾಡಿ ಎಂದು ಸಂದೇಶಗಳು ಬರುತ್ತವೆ ಅವುಗಳೂ ಕೂಡಾ ಹ್ಯಾಕಿಂಗ್ ನ ಒಂದು ಜಾಲವಾಗಿರಬಹುದು. ಆದ್ದರಿಂದ ಅಂತರ್ಜಾಲವನ್ನು ಉಪಯೋಗಿಸುವಾಗ ನಾವು ಎಷ್ಟು ಸಾದ್ಯವೋ ಅಷ್ಟು ಜಾಗರೂಕರಾಗಿರುವುದು ಉತ್ತಮ. ಗಣಕಯಂತ್ರಗಳಿಗೆ ಒಳ್ಳೆಯ ಪ್ರೀಮಿಯಂ ಆ್ಯಂಟಿವೈರಸ್ ಅಳವಡಿಕೆಯಿಂದ ಸ್ವಲ್ಪಮಟ್ಟಿಗೆ ಸುರಕ್ಷಿತರಾಗಿರಬಹುದು. ಇಂಟರ್ನೆಟ್ಟಿನ ಬಗ್ಗೆ ಬರೆಯುತ್ತಾ ಹೋದರೆ ಅದೊಂದು ಮೆಗಾ ಸೀರಿಯಲ್ ಆಗಬಹುದು ಸದ್ಯಕ್ಕೆ ಇಷ್ಟರಲ್ಲೆ ಮುಗಿಸೋಣ ಮುಂದೆ ಈ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.

- ಕುಮಾರ್

 

Photo by Markus Spiske on Unsplash

Comments