ಮೋಡಿ ಮಾಡುವ ಜಾಹೀರಾತುಗಳ ಮಾಯಾಲೋಕ

 ಹಾಯ್ ಗೆಳೆಯರೆ, ತುಂಬಾ ದಿನಗಳ ನಂತರ ಮತ್ತೆ ಹೊಸ ಲೇಖನದೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ. ಈ ದಿನ ನಾನು ಬರೆಯುತ್ತಿರುವ ಲೇಖನ ಜಾಹೀರಾತುಗಳ ಬಗ್ಗೆ. ಕೆಲವು ದಿನಗಳಿಂದ ಟಿವಿ ನೋಡುವಾಗ ಒಂದು ಜಾಹೀರಾತು ಬರುತ್ತಿತ್ತು ಆರೆಂಜ್ ಜೂಸ್ ಕುಡಿಯುವಾಗ ಆರೆಂಜ್ ತುಂಡು ತಲೆಯ ಮೇಲೆ ತಿರುಗುತ್ತಾ ಇರುವುದನ್ನು ಅದರಲ್ಲಿ ಭಿತ್ತರಿಸಲಾಗುತ್ತಿದೆ. ಈ ಜಾಹೀರಾತು ನೋಡಿದಾಗಲೆಲ್ಲಾ ಮನೆಯಲ್ಲಿ ಒಂದೇ ಮಾತು “ಇದಕ್ಕೆ ಏನು ಅರ್ಥ ಎಂಬುವುದೇ ಗೊತ್ತಾಗುತ್ತಿಲ್ಲ” ಎಂದು. ಆಗ ನನಗೆ ಜಾಹೀರಾತುಗಳ ಬಗ್ಗೆ ಒಂದು ಲೇಖನ ಬರೆದರೆ ಹೇಗೆ ಎಂಬ ಆಲೋಚನೆ ಬಂತು. ಹಾಗೇ ಯೋಚಿಸಿ ಈ ಲೇಖನ ಬರೆಯಲು ಶುರು ಮಾಡಿದೆ. ಇಲ್ಲಿ ನಾನು ಯಾವುದೇ ಕಂಪನಿ ಅಥವಾ ಅವುಗಳು ಮಾರುವ ವಸ್ತುಗಳ ಬಗ್ಗೆ ಠೀಕಿಸುತ್ತಿಲ್ಲ ಕೇವಲ ನನ್ನ ಅಭಿಪ್ರಾಯವನ್ನು ಬರೆಯುತ್ತಿದ್ದೇನೆ.

TV advertisement
ಈಗ ಮುಖ್ಯ ವಿಷಯಕ್ಕೆ ಬರೋಣ ನಾವು ವಿವಿಧ ರೀತಿಯ ಜಾಹೀರಾತುಗಳನ್ನು ನೋಡುತ್ತೇವೆ. ಅದು ದಿನಪತ್ರಿಕೆಯಲ್ಲಿ ಬರುವಂತದ್ದಿರಬಹುದು ಅಥವಾ ದಿನಪತ್ರಿಕೆಯ ಒಳಗೆ ಅಡಗಿ ಕುಳಿತು ಟ್ರೋಜನ್‌ನಂತೆ ಬರುವ ಕರಪತ್ರದ ಜಾಹೀರಾತು ಇರಬಹುದು, ಇವುಗಳಲ್ಲಿ ಒಂದು ವಸ್ತುವಿನ ಬಗ್ಗೆ ಅಥವಾ ಹೊಸ ವಸ್ತು ಮಾರುಕಟ್ಟೆಗೆ ಬಿಡುಗಡೆಯಾದ ಬಗ್ಗೆ ವಿವರಗಳನ್ನೊಳಗೊಂಡ ಜಾಹೀರಾತು ಪ್ರಕಟವಾಗಿರುತ್ತದೆ. ಆದರೆ ಈ ಟಿ.ವಿ. ಬಂದ ನಂತರ ಜಾಹೀರಾತಿನ ರೂಪವೇ ಬದಲಾಗಿದೆ. ಹೊಸ ಹೊಸ ಬಗೆಯ ಪರಿಕಲ್ಪನೆಗಳು ಜಾಹೀರಾತಿನಲ್ಲಿ ಬರತೊಡಗಿದೆ. ನಾನು ಮುಖ್ಯವಾಗಿ ಬರೆಯಲು ಹೊರಟಿರುವುದು ಟಿ.ವಿ. ಜಾಹೀರಾತಿನ ಬಗ್ಗೆ. ಟಿವಿಯಲ್ಲಿ ಕೆಲ ವರ್ಷಗಳ ಹಿಂದೆ ಬರುತ್ತಿದ್ದ ಜಾಹೀರಾತಿಗೂ ಈಗಿನ ಜಾಹೀರಾತಿಗೂ ಇರುವ ವ್ಯತ್ಯಾಸಗಳನ್ನು ನೀವು ಗಮನಿಸಿರಬಹುದು. ಆಗ ಹೆಚ್ಚಿನ ಜಾಹೀರಾತುಗಳಿಗೆ ಒಂದು ಅರ್ಥ ಇರುತ್ತಿತ್ತು. ನಾನು “ಹೆಚ್ಚಿನ” ಎಂದು ಹೇಳಿದ ಉದ್ದೇಶ ನಿಮಗೆ ತಿಳಿಯಿತು ಎಂದು ನನ್ನ ಭಾವನೆ. ಈಗಿನ ಜಾಹೀರಾತುಗಳನ್ನು ನೀವು ನೋಡಿ ಅವುಗಳಲ್ಲಿ ಬರುವ ಮುಖ್ಯ ವಿಷಯ ಏನು ಗೊತ್ತೇ ? ನೀವು ಕಪ್ಪಗಿದ್ದರೆ ನಿಮ್ಮನ್ನು ಯಾರೂ ಇಷ್ಟಪಡಲ್ಲ, ನಿಮಗೆ ಕೆಲಸ ಸಿಕ್ಕಲ್ಲ, ಮದುವೆ ಆಗಲ್ಲ ಎಂದು ತೋರಿಸಿ, ತಮ್ಮ ಕಂಪನಿಯ ಕ್ರೀಮ್ ಹಚ್ಚಿ ಒಂದೇ ತಿಂಗಳಲ್ಲಿ ಬೆಳ್ಳಗೆ ಚಂದ್ರನಂತೆ  ಹೊಳೆಯಿರಿ, ನೀವು ಬಯಸಿದ ಕೆಲಸ ನಿಮಗೆ ದೊರಕುವುದು, ನೀವು ಬಯಸಿದ ಹುಡುಗ ಯಾ ಹುಡುಗಿ ನಿಮ್ಮನ್ನು ಇಷ್ಟಪಡುವಂತೆ ಆಗುವುದು ಎಂದು ತೋರಿಸುತ್ತಾರೆ. ಇಂತಹ ಜಾಹೀರಾತು ನೋಡಿ ನಮ್ಮ ಜನರಿಗೆ ಕಪ್ಪು ಬಣ್ಣ ಎಂಬುದು ಕುರೂಪತೆ ಎಂಬುವುದನ್ನು ಬಿಂಬಿಸಲಾಗುತ್ತದೆ. ಆದರೆ ಪುರಾಣದಲ್ಲಿ ಬರುವ ಅತ್ಯಂತ ಸುಂದರಿ ಎಂದು ಪ್ರಖ್ಯಾತಿ ಹೊಂದಿದ್ದ ದ್ರೌಪದಿಯೂ ಕೃಷ್ಣವರ್ಣದವಳು ಎಂದೂ ಹಾಗಾಗಿಯೇ ಅವಳನ್ನು ಕೃಷ್ಣೆ ಎಂದು ಕರೆಯುತ್ತಿದ್ದರು ಎಂಬ ವಿಷಯ ಎಷ್ಟೊ ಮಂದಿಗೆ ತಿಳಿದಿಲ್ಲ. ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಇಂತಹ ಪರಿಕಲ್ಪನೆಯನ್ನು ಸೃಷ್ಟಿಸಿ ಜನರ ದಿಕ್ಕು ತಪ್ಪಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ನನಗೆ ಕಾಡುತ್ತದೆ. ಇದರಿಂದ ಜನರಲ್ಲಿ ತಮ್ಮ ಬಗ್ಗೆ ಕೀಳರಿಮೆ ಮೂಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.  ಹಾಗೆಯೇ ಇದೇ ತರಹದ ಇನ್ನೊಂದು ಜಾಹೀರಾತು ಡಿಟರ್ಜೆಂಟ್‌ಗಳದ್ದು ನಿಮ್ಮ ಬಟ್ಟೆ ಹೊಳೆಯುತ್ತಿದ್ದರೆ ನಿಮಗೆ ಬಯಸಿದ ಕೆಲಸ ಸಿಗುತ್ತೆ ಎನ್ನುವುದನ್ನು ತೋರಿಸಲಾಗುತ್ತಿದೆಯಲ್ಲ ನಿಜ ಜೀವನದಲ್ಲಿ ಇದು ಸಾಧ್ಯನಾ? ನಂತರ ಬರುವುದು ಸುಗಂಧ ದ್ರವ್ಯಗಳ ಸರದಿ ಆಹಾ!!!! ಇವುಗಳ ಜಾಹೀರಾತು ನೀವು ನೋಡಿದರೆ ಇಲ್ಲಿ ತೋರಿಸಲಾಗುವ ಕೆಲ ದೃಶ್ಯಗಳು ಕಲ್ಪನೆಗೂ ಮೀರಿದ್ದು. ಡಿಯೊ ಹಾಕಿದ ತಕ್ಷಣ ಹುಡುಗಿಯರು ಆಕರ್ಷಿತರಾಗುತ್ತಾರೆ ಎಂದು ತೋರಿಸಲಾಗುತ್ತದೆ ಅಷ್ಟೆ ಅಲ್ಲ ಸಭ್ಯತೆಗೂ ಮೀರಿದ ಕೆಲವನ್ನು ತೋರಿಸಲಾಗುತ್ತೆ ಅದನ್ನು ಬರೆಯುವುದು ನನಗೆ ಸಮಂಜಸ ಎನಿಸುತ್ತಿಲ್ಲ ಅದು ನಿಮಗೆ ಅರ್ಥ ಆಗಿದೆ ಎಂದು ಭಾವಿಸುತ್ತೇನೆ. ಈ ಎಲ್ಲಾ ಜಾಹೀರಾತುಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ವಿಷಯ, ಒಂದು ಕಾಮನ್ ಪೊಯಿಂಟ್ ನಮಗೆ ತೋರುತ್ತೆ ಅದೇನೆಂದರೆ ಈ ಎಲ್ಲಾ ಜಾಹೀರಾತುಗಳು ಯುವ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಹುಡುಗರಿಗೆ, ಹುಡುಗಿಯರು ಆಕರ್ಷಿತರಾಗುತ್ತರೆ ಎಂದೂ, ಹುಡುಗಿಯರಿಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಡೀ ಜಗತ್ತೇ ನಿಮ್ಮತ್ತ ಆಕರ್ಷಿತವಾಗುತ್ತದೆ ಎಂದೂ ಹೇಳಲಾಗುತ್ತದೆ. ಈಗೀಗ ಚಿಪ್ಸಿನ ಜಾಹೀರಾತಿನಲ್ಲೂ ಹುಡುಗಿಯರನ್ನು ಆಕರ್ಷಿಸುವ ದೃಶ್ಯಗಳು ಕಂಡು ಬರುತ್ತಿದೆ. ಅಲ್ಲಾ ಇವರು ಏನು ಹೇಳಲು ಹೊರಟಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಇನ್ನು ಈ ತಂಪು ಪಾನೀಯಗಳ ಜಾಹೀರಾತುಗಳದ್ದು ಬೇರೆಯೇ ಪ್ರಪಂಚ ಇಲ್ಲಿ ನಿಜ ಜೀವನಕ್ಕೆ ವಿರುದ್ಧವಾದ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಒಂದು ಬಗೆಯ ಪಾನೀಯವನ್ನು ಕುಡಿದು ನೀವು ಗಾಳಿಯಲ್ಲಿ ಹಾರುತ್ತೀರಿ, ಇನ್ನೊಂದನ್ನು ಕುಡಿದು ಮಿಂಚಿನಂತೆ  ಓಡುತ್ತೀರಿ, ಮತ್ತೊಂದನ್ನು ಕುಡಿದು ಭಯಾನಕ ಸ್ಟಂಟ್‌ಗಳನ್ನು ಚಿಟಿಕೆ ಹೊಡೆಯುವುದರಲ್ಲಿ ಮಾಡಿ ಮುಗಿಸುತ್ತೀರಿ ಹೀಗೆ ಹೇಳುತ್ತಾ ಹೊರಟರೆ ನನಗೆ ನಗು ಬರುತ್ತಿದೆ. ಇನ್ನು ಟೂಥ್‌ಪೇಸ್ಟ್ ವಿಷಯಕ್ಕೆ ಬಂದರೆ ಚಿನ್ನ ಬೆಳ್ಳಿ ಎರಡನ್ನು ಬಿಟ್ಟು ಉಳಿದೆಲ್ಲಾ ವಸ್ತುಗಳನ್ನು ಟೂಥ್‌ಪೇಸ್ಟ್ನಲ್ಲಿ ಈಗಾಗಲೇ ಹಾಕಿಯಾಗಿದೆ. ಒಟ್ಟಿನಲ್ಲಿ ನಮ್ಮ ಮನಸ್ಸನ್ನು ಕಂಟ್ರೋಲ್ ಮಾಡಿ ಅವರು ಹೇಳಿದ್ದೇ ಸರಿ ಎನ್ನುವಷ್ಟರ ಮಟ್ಟಿಗೆ ನಮ್ಮನ್ನು ಮೋಡಿ ಮಾಡುತ್ತಿರುವುದಂತೂ ಸತ್ಯ. ಸಿನೆಮಾ ಜಗತ್ತಿನ ಸೂಪರ್ ಸ್ಟಾರ್‌ಗಳನ್ನು ಈ ಜಾಹೀರಾತುಗಳಿಗೆ ಬಳಸಲಾಗುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗೋಣ ಮಕ್ಕಳು ಹುಟ್ಟುವ ಮೊದಲೇ ಅವರಿಗೆ ಏನು ತಿನ್ನಿಸಬೇಕು ಎಂಬುದುನ್ನು ಇವರೇ ಹೇಳಿಕೊಡುತ್ತಾರೆ. ಮಗುವಿಗೆ ಯಾವ ಶಾಂಪು, ಸೋಪು, ಪೌಡರ್ ಬಳಸಬೇಕು, ಏನು ತಿನ್ನಿಸಬೇಕು ಎಂದು ಈ ದೊಡ್ಡ ದೊಡ್ಡ ಬಹುರಾಷ್ಟ್ರೀಯ  ಕಂಪನಿಗಳು ನಿರ್ಧರಿಸುತ್ತವೆ. ಟ್ರೆಂಡ್‌ಗೆ ತಕ್ಕಂತೆ ಜಾಹೀರಾತುಗಳ ಶೈಲಿಯಲ್ಲಿ ಬದಲಾವಣೆಯನ್ನು ನಾವು ಗಮನಿಸಬಹುದು ಉದಾಹರಣೆಗೆ ಕಳೆದ ಕೋವಿಡ್-19 ಮಹಾಮಾರಿಯ ಸಂದರ್ಭದಲ್ಲಿ ಎಲ್ಲಾ ಸೋಪುಗಳು, ಎಲ್ಲಾ ಹ್ಯಾಂಡ್ ವಾಶ್‌ಗಳು, ಟಾಯ್ಲೆಟ್ ಕ್ಲೀನರ್‌ಗಳು ಕೋವಿಡ್ ವೈರಸನ್ನು ಕೊಲ್ಲುತ್ತವೆ ಎಂದು ಅಚಾನಕ್ಕಾಗಿ ಸಾಬೀತಾಗಿಬಿಟ್ಟವು. ಈ ವಿಷಯ ನಿಮ್ಮ ಗಮನಕ್ಕೂ ಬಂದಿರಬಹುದು ಅಲ್ಲವೇ ? ಇತ್ತೀಚಿಗೆ ಇನ್ನೊಂದು ಹೊಸ ಬೆಳವಣಿಗೆಯನ್ನು ನೀವು ಕಂಡಿರಬಹುದು. ಅದೇನೆಂದರೆ ನಮ್ಮ ದೇಶ ಭಕ್ತಿಯನ್ನು ದೇಶದ ಮೇಲಿರುವ ನಮ್ಮ ಪ್ರೀತಿಯನ್ನು, ಕಂಪನಿಗಳು ತಮ್ಮ ವಸ್ತುಗಳನ್ನು ಕೊಳ್ಳುವಂತೆ ಮಾಡಲು ಉಪಯೋಗಿಸುತ್ತಿವೆ. ಇದು ಅತ್ಯಂತ ದುಃಖದ ವಿಷಯ ಕೇವಲ ಒಂದು ವಸ್ತುವನ್ನು ಮಾರಲು “ಈ ವಸ್ತು ದೇಶಭಕ್ತಿಯ ಪ್ರತೀಕ” ಎಂದು ಬಿಂಬಿಸುವುದು ಸರಿಯೇ ಎಂಬ ಪ್ರಶ್ನೆಯನ್ನು ನಾವು ಕೇಳಬೇಕಾಗಿದೆ. ನನಗೆ ತಿಳಿದಂತೆ ಆಲ್ಕೊಹಾಲ್ ಪ್ರೊಡಕ್ಟ್ ಗಳಿಗೆ ಟಿ.ವಿ. ಜಾಹೀರಾತು ನೀಡುವಂತಿಲ್ಲ. ಆದರೆ ಹೊಸ ಕಂಪನಿಯ ಮದ್ಯವನ್ನು ಪ್ರಚಾರ ಮಾಡಬೇಕೆಲ್ಲಾ ಅದಕ್ಕೆಂದು ಅದೇ ಹೆಸರಿನ ಸೋಡವನ್ನು ಮದ್ಯ ಕಂಪನಿಗಳು ಮಾರುಕಟ್ಟೆಗೆ ತರುತ್ತವೆ ಮತ್ತು ಅದರ ಜಾಹೀರಾತು ನೀಡುತ್ತವೆ. ಮದ್ಯವನ್ನು ಜಾಹೀರಾತಿನ ಮೂಲಕ ಪ್ರಚಾರ ಮಾಡುವುದು ಒಳ್ಳೆಯದಲ್ಲ ಎನ್ನುವುದು ನನ್ನ ಭಾವನೆ ಅದಕ್ಕಾಗಿ ಈ ವಿಷಯವನ್ನು ಲೇಖನದ ಕೊನೆಯಲ್ಲಿ ಇರಲಿ ಎಂದು ಸೇರಿಸಿದೆ. ಒಟ್ಟಿನಲ್ಲಿ ಹೇಳುವುದಾದರೆ ಜಾಹೀರಾತುಗಳು ನಮ್ಮ ಅಭಿರುಚಿಯನ್ನು ತಮಗೆ ಬೇಕಾದಂತೆ ಬದಲಾಯಿಸುವ ಶಕ್ತಿಯನ್ನು ಹೊಂದಿದೆ ಎನ್ನುವುದು ಮಾತ್ರ ಅಕ್ಷರಶಃ ನಿಜ.

ಇಷ್ಟೆಲ್ಲಾ ಹೇಳಿದ ನಂತರ ಕೊನೆಯಲ್ಲಿ ನನ್ನ ಆಶಯವನ್ನು ತಿಳಿಸುವುದು ತುಂಬಾ ಮುಖ್ಯ. ನಾನು ಇಲ್ಲಿ ಜಾಹೀರಾತು ಕಂಪನಿಯನ್ನಾಗಿ ಅಥವಾ ಜಾಹೀರಾತು ಕೊಡುವವರನ್ನಾಗಿ ದೂಷಿಸಲು ಈ ಲೇಖನ ಬರೆದಿಲ್ಲ. ನಾವು ವಸ್ತುಗಳನ್ನು ಖರೀದಿಸುವಾಗ ಮುಖ್ಯವಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ಅಥವಾ ಆಹಾರ ವಸ್ತುಗಳಾಗಲಿ ಜಾಹೀರಾತಿನ ಮೋಡಿಗೆ ಬಿದ್ದು ಖರೀದಿಸುವುದು ತಪ್ಪು. ಸಿನಿಮಾ ಹೀರೋ ಹಿರೋಯಿನ್‌ಗಳೂ ಪ್ರಚಾರ ಮಾಡುವ ವಸ್ತಗಳನ್ನು ಅವರು ಒಂದು ದಿನವೂ ಉಪಯೋಗಿಸಿರಲಿಕ್ಕಿಲ್ಲ. ಅವರು ಹೇಳುತ್ತಾರೆ ಎಂದ ಮಾತ್ರಕ್ಕೆ ಅದು ಅತ್ಯುತ್ತಮ ವಸ್ತು ಆಗುವುದಿಲ್ಲ ಅಥವಾ ಬಿಳಿ ಕೋಟು ಧರಿಸಿ ಡಾಕ್ಟರ್‌ಗಳಂತೆ ಪೋಸು ಕೊಟ್ಟು ಹೇಳಿದ ಮಾತುಗಳು ನಿಜವಲ್ಲ ಎಂಬುದನ್ನು ನಾವು ಅರಿಯಬೇಕು. ಹಾಗಾದಾಗ ಮಾತ್ರ ನಾವು ಈ ಜಾಹೀರಾತುಗಳ ಮಾಯಾಲೋಕದಿಂದ ಹೊರಬರಲು ಸಾಧ್ಯ. 


ಇಂತಿ ನಿಮ್ಮ ಕುಮಾರ್

Comments

  1. This comment has been removed by a blog administrator.

    ReplyDelete
  2. This comment has been removed by a blog administrator.

    ReplyDelete
  3. This comment has been removed by a blog administrator.

    ReplyDelete

Post a Comment