ಮೋಸಗಾರರಿದ್ದಾರೆ ಎಚ್ಚರಿಕೆ

ಮೋಸಗಾರರಿದ್ದಾರೆ ಎಚ್ಚರಿಕೆ


ಹಾಯ್ ಗೆಳೆಯರೇ,
ಲೇಖನದ ಶೀರ್ಷಿಕೆ ನೋಡಿ ಆಶ್ಚರ್ಯ ಆಯ್ತಾ ? ಹೌದು, ನಾನು ಇಂದು ಬರೆಯುತ್ತಿರುವ ವಿಷಯಕ್ಕೆ ಈ ಶೀರ್ಷಿಕೆ ಸರಿಯಾಗಿ ಹೊಂದುತ್ತದೆ. ಇದು ಇತ್ತೀಚಿಗೆ ನಡೆದ ಘಟನೆ, ಜಗತ್ತಿನಲ್ಲಿ ಯಾವ ರೀತಿ ಜನರು ಮೋಸ ಮಾಡುತ್ತಾರೆ, ನಂಬಿಕೆ ದ್ರೋಹ ಮಾಡುತ್ತಾರೆ ಎನ್ನುವುದಕ್ಕೆ ಹಿಡಿದ ಕನ್ನಡಿ ಈ ಲೇಖನ. ಸರಿ ಈಗ ನಾನು ನೇರವಾಗಿ ವಿಷಯಕ್ಕೆ ಬರುತ್ತೇನೆ. ಅಂದು ನಮ್ಮ ಆಫೀಸಿನಲ್ಲಿ ಒಂದು ಸಣ್ಣ ಕಾರ್ಯಕ್ರಮ ಇತ್ತು. ಹಾಗಾಗಿ ನನಗೆ ಸ್ವಲ್ಪ ಕೆಲಸ ಜಾಸ್ತಿ ಇತ್ತು. ಈ ಕೆಲಸದ ಮದ್ಯೆ ಒಬ್ಬ ವ್ಯಕ್ತಿ ನಮ್ಮ ಆಫಿಸಿನ ಪೇಪರ್ ಓದುವ ಸ್ಥಳ ಒಂದಿದೆ ಅಲ್ಲಿ ಕುಳಿತಿರುವುದು ನಾನು ಗಮನಿಸಿದ್ದೆ. ಅದು ನನಗೆ ಹೊಸತಾಗಿ ಕಾಣಲಿಲ್ಲ ಯಾಕೆಂದರೆ ಅಲ್ಲಿ ಪೇಪರ್ ಓದುತ್ತಾ ಹೊರಗಿನವರು ಯಾರಾದರೂ ಹೆಚ್ಚಾಗಿ ಇರುತ್ತಿದ್ದರು. ಹಾಗಾಗಿ ನಾನು ಅವರ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ. ಮದ್ಯಾಹ್ನ ಲಂಚ್ ಟೈಮ್ ನಲ್ಲಿ ನಾನು ಊಟ ಮುಗಿಸಿ ಬರುವ ಹೊತ್ತಿಗೆ ಆ ವ್ಯಕ್ತಿ ನನ್ನ ಆಫಿಸ್ ಇರುವ ಮಹಡಿಯಲ್ಲಿ ಕಾಣಿಸಿಕೊಂಡರು. ನಾನು ವಿಚಾರಣೆ ಮಾಡಿದಾಗ ಏನೂ ಇಲ್ಲಾ ಹೀಗೆ ಬಂದೆ ಅಂದರು. ಸರಿ ಅಂತಾ ನಾನು ಸುಮ್ಮನಾದೆ. ಆವಾಗ ಆಫಿಸಿನಲ್ಲಿ ಯಾರೂ ಇರಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಆ ವ್ಯಕ್ತಿ ಮತ್ತೆ ನನ್ನ ಬಳಿ ಬಂದು “ನಿಮ್ಮ ಬಳಿ ಗೂಗಲ್ ಪೇ ಇದೆಯಾ” ಎಂದು ಕೇಳಿದ್ರು. ನಾನು “ಇಲ್ಲಾ ನಾನು ಗೂಗಲ್ ಪೇ ಉಪಯೋಗಿಸಲ್ಲ. ಅದರಲ್ಲಿ ಅಕೌಂಟ್ ಮಾಡಲು ನನ್ನ ಮೊಬೈಲ್‌ನಲ್ಲಿ ಆಗುತ್ತಿಲ್ಲ” ಎಂದು ಹೇಳಿದೆ. ಮತ್ತೇ ನಾನೇ ಕೇಳಿದೆ ಏನು ವಿಷ್ಯ ? ಏನಾಯಿತು ಎಂದು. ಈಗ ನನಗೆ ಅನಿಸುತ್ತೇ ನನಗೆ ಇದು ಬೇಕಿರಲಿಲ್ಲ ಅಂತ. ನಾನು ಕೇಳಿದ ತಕ್ಷಣ ಅವರು ಹೇಳಿದ್ರು, “ ನನ್ನ ಬೈಕ್ ಟೈರ್ ಪಂಚರ್ ಆಗಿದೆ ಹೊಸ ಟಯರ್ ಹಾಕಲು ಹೇಳಿದ್ದೇನೆ. ನನ್ನ ಬಳಿ 800 ರೂಪಾಯಿ ಕಡಿಮೆ ಇದೆ ಅದಕ್ಕೆ ನಾನು ನಿಮಗೆ ಗೂಗಲ್ ಪೇ ನಿಂದ ಹಣ ಸೆಂಡ್ ಮಾಡ್ತೇನೆ ನನಗೆ ಕ್ಯಾಶ್ ಬೇಕಿತ್ತು ಅಂದ್ರು. ಗೂಗಲ್ ಪೇನಲ್ಲಿ ಅಕೌಂಟ್ ಮಾಡುವಾಗ ನನಗೆ ಒಂದು ಕೆಟ್ಟ ಅನುಭವ ಆಗಿತ್ತು, ನಾನು ಅದನ್ನು ಅವರಿಗೆ ಹೇಳಿ ನಾನು ಅದನ್ನು ಉಪಯೋಗಿಸಲ್ಲ ಬೇಕಾದರೆ ಫೋನ್ ಪೇ ಇದೆ ಅಂದೆ. ಅದಕ್ಕೆ ಅವರು “ಫೋನ್ ಪೇ ನನ್ನ ಬಳಿ ಇಲ್ಲ ಎರಡು ಯು.ಪಿ.ಐ. ಆ್ಯಪ್ ಯಾಕೆ ಅಂತ ನಾನು ಡೌನ್‌ಲೋಡ್ ಮಾಡಿಲ್ಲ ಅಂದ್ರು”. ಸ್ವಲ್ಪ ಹೊತ್ತು ಕಳೆದು ಮತ್ತೆ ಆ ವ್ಯಕ್ತಿ ನನ್ನ ಬಳಿ ಬಂದ್ರು “ ಹೇಗಾದ್ರು ಹೆಲ್ಪ್ ಮಾಡಿ ಮರ‍್ರೆ, ನಾನು ಈಗ ವಾಪಸು ಮನೆಗೆ ಹೋಗಿ ಕ್ಯಾಶ್ ತರಬೇಕು, ಮನೆ 33 ಕಿ.ಮೀ. ದೂರ ಇದೆ. ಈಗ ಬಸ್‌ಗಳು ಕೂಡಾ ಸರಿಯಾಗಿ ಸಿಗಲ್ಲ. ಕ್ಯಾಶ್ ತೆಗೆದು ಕೊಡಿ ನಾನು ಇವತ್ತು ಸಂಜೆ 5.00 ಗಂಟೆಗೆ ತಲುಪಿಸುತ್ತೇನೆ, ಪ್ಲೀಸ್ ಹೆಲ್ಪ್ ಮಾಡಿ” ಎಂದು ಕೇಳಿಕೊಂಡ್ರು. “ನನ್ನ ನಂಬರ್ ತೆಗೆದುಕೊಳ್ಳಿ,” ಎಂದು ಹೇಳಿ ಅವರ ಮೊಬೈಲ್‌ನಿಂದ ನನಗೆ ಮಿಸ್ಡ್ ಕಾಲ್ ಕೊಟ್ಟು ಅವರ ಹೆಸರು ಹೇಳಿ "ನಂಬರ್ ಸೇವ್ ಮಾಡಿ ನಾನು ಕಾಲ್ ಮಾಡ್ತೇನೆ 5 ಗಂಟೆಗೆ ಮೊದಲೇ ಕ್ಯಾಶ್ ಕೊಡ್ತೇನೆ" ಅಂದ್ರು. ನನಗೆ ಸ್ವಲ್ಪ ಆಶ್ಚರ್ಯ ಆಯ್ತು 5 ಗಂಟೆಯ ಒಳಗೆ ಹಣ ವಾಪಾಸು ಕೊಡುವುದು ಸಾಧ್ಯವಾಗುವ ಹಾಗೆ ಇದ್ದರೆ ಈಗ ಯಾಕೆ ಕ್ಯಾಶ್ ಇಲ್ಲ ಅಂತ ನಾನು ಯೋಚಿಸಿದೆ. ಆಗ ಸಮಯ 2.30 ಇರಬಹುದು. ನನ್ನ ಯೋಚನೆ ಅವರಿಗೆ ಗೊತ್ತಾಯಿತೋ ಏನೋ ಅವರೇ ಮುಂದುವರಿಯುತ್ತಾ, ನನ್ನ ಫ್ರೆಂಡ್‌ನನ್ನು ಭೇಟಿಯಾಗಲು ಹೋಗ್ತಿದ್ದೇನೆ. ಅವನ ಬಳಿ ಫೋನ್ ಪೇ ಮಾಡಿಸುತ್ತೇನೆ ಅಥವಾ ಕ್ಯಾಶ್ ತಂದು ಕೊಡ್ತೇನೆ ಅಂದ್ರು. ಅವರು ಅಷ್ಟು ಕೇಳಿಕೊಂಡಾಗ ನನಗೂ ಪಾಪ ಅನ್ನಿಸಿತು ಹೇಗಿದ್ದರೂ 5 ಗಂಟೆಗೆ ತಂದು ಕೊಡ್ತೇನೆ ಅಂದಿದ್ದಾರೆ ಫೋನ್ ನಂಬರ್ ಬೇರೆ ಕೊಟ್ಟಿದ್ದಾರೆ ಇವರು ಮೋಸ ಮಾಡ್ಲಿಕ್ಕಿಲ್ಲ ಎಂದು ಅನ್ನಿಸಿತು. “ ಸರಿ ನಾನು ಕ್ಯಾಶ್ ಕೊಡ್ತೇನೆ, ಎ.ಟಿ.ಎಂ.ಗೆ ಹೋಗೋಣ, 5 ಗಂಟೆಗೆ ವಾಪಸ್ಸು ಕೊಡ್ತಿರಲ್ಲಾ ? “ ಎಂದು ಕೇಳಿದೆ. ಅದಕ್ಕೆ ಅವರು “5 ಗಂಟೆಗೆ ಖಂಡಿತಾ ಕೊಡ್ತೇನೆ ನಾನು ಫೋನ್ ಮಾಡ್ತೇನೆ” ಅಂದ್ರು. ನಾನು ಅವರನ್ನು ಕರೆದುಕೊಂಡು ಎ.ಟಿ.ಎಂ.ಗೆ ಹೋಗಿ 1,000 ರೂಪಾಯಿ ವಿತ್‌ಡ್ರಾ ಮಾಡಿದೆ. ಲೆಕ್ಕ ಮಾಡಿ ಅವರಿಗೆ 800 ರೂಪಾಯಿ ಕೊಟ್ಟೆ. ಅದಕ್ಕೆ ಅವರು ಹೇಳಿದ್ರು 850 ಬೇಕಿತ್ತು ಅಂತ. ನನ್ನ ಬಳಿ 50 ರೂಪಾಯಿ ಇರಲಿಲ್ಲ ಅದನ್ನು ಗಮನಿಸಿದ ಅವರು ಹೇಳಿದ್ರು ನನಗೆ 1000 ರೂಪಾಯಿ ಕೊಡಿ ರಿಪೇರಿ ಮಾಡುವವರಿಗೆ ಟಿಪ್ಸ್ ಕೊಡ್ತೇನೆ ನಿಮಗೆ 1000 ರೂಪಾಯಿ ವಾಪಾಸು ಕೊಡ್ತೇನೆ ಅಂದ್ರು. ನಾನು 900 ರೂಪಾಯಿ ಕೊಟ್ಟು ಹೇಳಿದೆ “ಸಂಜೆ 5 ಗಂಟೆಗೆ ಕಾಲ್ ಮಾಡ್ತೇನೆ” ಅದಕ್ಕೆ ಅವರು ಹೇಳಿದ್ರು “ಬೇಡ ನಾನು ಅದಕ್ಕಿಂತ ಮೊದಲೇ ಹಣ ತಲುಪಿಸುತ್ತೇನೆ. ತುಂಬಾ ಥ್ಯಾಂಕ್ಸ್ ನೀವು ಹೆಲ್ಪ್ ಮಾಡಿದಕ್ಕೆ” ಎಂದು ಹೇಳಿ ಹೊರಟರು. ನಾನು ವಾಪಾಸು ಬಂದು ನನ್ನ ಕೆಲಸದಲ್ಲಿ ತೊಡಗಿದೆ. ಸಂಜೆ ಗಂಟೆ 5.00 ಆಯ್ತು ಫೋನ್ ಮಾಡ್ತೇನೆ ಎಂದು ಹೇಳಿದ ವ್ಯಕ್ತಿಯ ಸುದ್ದಿ ಇಲ್ಲ. ನಾನು 10 ನಿಮಿಷ ಕಾದು ಅವರಿಗೆ ಕರೆ ಮಾಡಿದೆ ತಕ್ಷಣ ಫೋನ್ ರಿಸೀವ್ ಆಯ್ತು. ನಾನು ಕೇಳುವ ಮೊದಲೇ ಅವರು ಹೇಳಿದ್ರು “ ನಾನು ಇನ್ನೂ ಗ್ಯಾರೇಜ್‌ನಲ್ಲಿಯೇ ಇದ್ದೇನೆ ಸ್ವಲ್ಪ ತಡ ಆಗಬಹುದು. ನೀವು ಎಷ್ಟು ಗಂಟೆ ವರೆಗೆ  ಇರ್ತೀರಿ ಆಫೀಸಲ್ಲಿ” ಎಂದು ಕೇಳಿದರು. ನಾನು 5.30ರ ತನಕ ಇರ್ತೇನೆ   ಅಂದೆ. ಅದಕ್ಕವರು ನಾನು ಬೇಗ ಬರ್ತೀನಿ   ಅಂತ ಹೇಳಿದ್ರು. 5.30 ಆಯ್ತು ಈ ಆಸಾಮಿ ಪತ್ತೆ ಇಲ್ಲ, ನಾನು ಆ ದಿನ 5:50ಕ್ಕೆ  ಆಫೀಸಿಂದ  ಹೊರಟೆ. ಹೊರಡುವಾಗ ಅವರಿಗೆ ಫೋನ್ ಮಾಡಿ ಎಲ್ಲಿದ್ದೀರಿ ನಾನು ಹೊರಟಾಯ್ತು ಇನ್ನೂ ಬಂದಿಲ್ಲವಲ್ಲಾ ಎಂದು ಕೇಳಿದೆ. ಅದಕ್ಕವರಂದ್ರು ಗ್ಯಾರೆಜ್ ಕೆಲಸದವರು ಮಾಲಿಕರತ್ರ ಮಾತಾಡ್ತಾ ಇದ್ದಾರೆ, ನೀವು ಯೋಚನೆ ಮಾಡ್ಬೇಡಿ ನಾನು ನಿಮ್ಮ ಆಫಿಸಿನಲ್ಲಿ ಕೊಟ್ಟು ನಿಮಗೆ ಫೋನ್ ಮಾಡ್ತೇನೆ ಅಥವಾ ನಾಳೆ ನನಗೆ ವಾಪಸು ಅಲ್ಲಿಗೆ ಬರಲು ಇದೆ ಆವಾಗ ಕೊಡ್ತೇನೆ ಅಂದ್ರು. ನನಗೆ ಅಲ್ಲಿಗೆ ಗ್ಯಾರಂಟಿ ಆಯ್ತು ಇವರು ನನಗೆ ಮೋಸ ಮಾಡ್ತಿದ್ದಾರೆ ಎಂದು. ನಾನು ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. 900 ರೂಪಾಯಿಗೋಸ್ಕರ ಪೋಲಿಸ್ ಕಂಪ್ಲೇಂಟ್ ಕೊಡೊಕ್ಕಾಗುತ್ತಾ ? ಇರಲಿ ನಾಳೆ ಫೋನ್ ಮಾಡೋಣಾ ಏನಾಗುತ್ತೇ ನೋಡೋಣ ಅಂದುಕೊಂಡು ಸುಮ್ಮನಾದೆ. ಮರುದಿನ ಬೆಳಿಗ್ಗೆ ಆಫೀಸಿಗೆ ಬಂದ ತಕ್ಷಣ ಅವರಿಗೆ ಫೋನ್ ಮಾಡಿದೆ ಫೋನ್ ಬ್ಯುಸಿ ಇತ್ತು. ಸ್ವಲ್ಪ ಹೊತ್ತಿನ ನಂತರ ಮತ್ತೇ ಕಾಲ್ ಮಾಡಿದೆ ಈ ಬಾರಿ ರಿಂಗ್ ಆಯ್ತು ಆದರೆ ಆ ಆಸಾಮಿ ಫೋನ್ ತೆಗೆಯಲೇ ಇಲ್ಲ ಮತ್ತೆ 2-3 ಸಲ ಕರೆ ಮಾಡಿದೆ ಆದರೆ ಯಾವುದೇ ಉಪಯೋಗ ಆಗಿಲ್ಲ. ಎರಡು ದಿನ ಬಿಟ್ಟು ಮತ್ತೆ ಕರೆ ಮಾಡಿದೆ ಈ ಬಾರಿಯೂ ಅಷ್ಟೇ ನಾನೂ ಪ್ರಯೋಜನ ಆಗಲಿಲ್ಲ. ನಾನು ಮತ್ತೆ ಕರೆ ಮಾಡ್ಲಿಲ್ಲ. ಆ 900 ರೂಪಾಯಿ ವಾಪಾಸ್ಸು ಸಿಗುವುದಿಲ್ಲ ಎಂದು ನನಗೆ ಖಾತ್ರಿ ಆಗಿ ಹೋಯ್ತು.
ಈ ಘಟನೆಯಿಂದ ನಾನು ಒಂದು ಪಾಠ ಕಲಿತೆ, ಅದೇ ನೀವು ಓದಿದ್ರಲ್ಲ ಶೀರ್ಷಿಕೆ ಅದೇ... ಈ ಕಾಲದಲ್ಲಿ ಯಾರು ಒಳ್ಳೆಯವರು ಯಾರು ಕೆಟ್ಟವರು ಎಂಬುದನ್ನು ಊಹಿಸಲೂ ಅಸಾಧ್ಯವಾಗಿದೆ. ಅವರ ಮುಖಭಾವದಲ್ಲಿ ನನಗೆ ಎಲ್ಲೂ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಎನಿಸಲಿಲ್ಲ. ಹೀಗೆ ಆದರೆ ಒಂದು ಮಾತ್ರ ಸತ್ಯ ನಿಜವಾಗಿಯೂ ಕಷ್ಟದಲ್ಲಿರುವವರು ಸಹಾಯ ಕೇಳಿದರೂ ನಮ್ಮ ಮನಸ್ಸು ಹಳೆಯ ಕಹಿ ಅನುಭವವನ್ನೇ ನಮಗೆ ನೆನಪಿಸಿ ಅವರಿಗೆ ಸಹಾಯ ಮಾಡಲು ಹಿಂದೇಟು ಹಾಕುವ ಪರಿಸ್ಥಿತಿ ಉದ್ಭವಿಸುತ್ತದೆ. ನಾನೂ ಇನ್ನು ಮುಂದೆ ಯಾರಿಗಾದರೂ ಸಹಾಯ ಮಾಡುವ ಮೊದಲು ಯೋಚನೆ ಮಾಡುವುದು ಉತ್ತಮ ಅಂದುಕೊಂಡಿದ್ದೇನೆ. ನೀವೂ ಜಾಗ್ರತೆ “ ಮೋಸಗಾರರಿದ್ದಾರೆ ಎಚ್ಚರಿಕೆ” 

- ಕುಮಾರ್ 

Comments

Post a Comment