ಒಂದು ಪ್ರವಾಸದ ಕಥೆ - ಭಾಗ 2

 ಹಾಯ್,  ಒಂದು ಪ್ರವಾಸದ ಕಥೆ ಲೇಖನದ ಎರಡನೇ ಅಧ್ಯಾಯ ಇದು. ನಾನು ಹೇಳಿದ್ದೆ ಅಲ್ವಾ ನಮ್ಮ ಪ್ರವಾಸದ ಯೋಜನೆ ಹಳೆಯ ಪುಸ್ತಕದಂತೆ ಸ್ಟೋರ್ ರೂಮಲ್ಲೇ ಇತ್ತು ಅಂತ  ಈಗ ಆ ಪುಸ್ತಕ ಮತ್ತೇ ಓದುವ ಸಂದರ್ಭ ಬಂತು. ನಮ್ಮ ಪ್ರವಾಸದ ವಿಷಯಗಳು ಮತ್ತೆ ನಮ್ಮ ವಾಟ್ಸ್ಯಾಪ್ ಗ್ರೂಪಲ್ಲಿ ಚರ್ಚೆಗೆ ಬಂತು. ಈ ಸಲ ಏನೇ ಆದರೂ ನಾವು ಪ್ರವಾಸ ಮಾಡಲೇ ಬೇಕು ಎಂದು ನಿರ್ಧರಿಸಿದೆವು. ಅದರಂತೆ ಮತ್ತೆ ಅದೇ ವಿಷಯಗಳು ಬಂದವು ಈ ಸಲ ವಾಹನದ  ಬಗ್ಗೆ ಜಾಸ್ತಿ ಚರ್ಚೆ ಬರಲಿಲ್ಲ. ಅದರ ವ್ಯವಸ್ಥೆ ಬೇಗನೆ ಆಗಿಹೋಯಿತು, ಇನ್ನು ಸ್ಥಳವೂ ಫಿಕ್ಸ್ ಆಯಿತು. ಈ ಸಲ ಕೂಡ್ಲು ತೀರ್ಥ ಜಲಪಾತಕ್ಕೆ ಹೋಗುವುದು ಎಂದು ನಿರ್ಧರಿಸಿದೆವು. ನಾನು ಒಂದು ಸಲ ಕಾಲೇಜಿನಲ್ಲಿರುವಾಗ ಎನ್.ಸಿ.ಸಿ. ಟ್ರೆಕ್ಕಿಂಗ್ ಗೆ ಕೂಡ್ಲುಗೆ ಹೋಗಿದ್ದೆ. ಅದರ ನಂತರ 6-7 ವರ್ಷಗಳ ನಂತರ ಮತ್ತೇ ಅಲ್ಲಿಗೆ ಹೋಗುವುದು ನನಗಂತೂ ತುಂಬಾ ಖುಷಿಯಾಗಿತ್ತು. ಈ ಸಲ ಗ್ರೂಪಲ್ಲಿ ಚರ್ಚೆ ಆಗುವಾಗ ನಾನೂ ಇರುತ್ತಿದ್ದೆ ಪಬ್ಜಿ ಬ್ಯಾನ್ ಆಗಿತ್ತಲ್ಲ ಹಾಗಾಗಿ. ನನ್ನ ತಮ್ಮ ಈ ಎಲ್ಲಾ ಚರ್ಚೆಗಳಿಂದ ದೂರನೇ ಇರುತ್ತಿದ್ದವನು ಈ ಸಲ ದಿನಾ ಗ್ರೂಪಿಗೆ ಬಂದು ಅವನೇ ವಿಷಯ ಶುರು ಮಾಡುತ್ತಿದ್ದ. ಎಂದಿನಂತೆ ಮುಖ್ಯ ವಿಷಯದಿಂದ ಶುರುವಾದ ಚರ್ಚೆ ಆವಾಗಾವಾಗ ಚೇಷ್ಟೆಯತ್ತ ವಾಲುತ್ತಿದ್ದರೂ ಈ ಬಾರಿ ಖಂಡಿತಾ ನಾವು ಪ್ರವಾಸ ಮಾಡುತ್ತೇವೆ ಎಂಬುದು ನಮಗೆ ಖಾತ್ರಿಯಾಗಿತ್ತು. ಹೀಗೆ ಪ್ರವಾಸದ ದಿನ ಹೇಗೆ ಎಲ್ಲಿಂದ ಹೊರಡುವುದು ಎಂದು ಯೋಚಿಸಿ, ಕೊನೆಗೆ ಎಲ್ಲರೂ ನಮ್ಮ ಮನೆಯಿಂದಲೆ ಹೊರಡೋಣ ಅಂಥ ನನ್ನ ತಂಗಿ ಹೇಳಿದಳು. ಎಲ್ಲರಿಗೂ ಅದು ಸರಿ ಎನಿಸಿ ನಾನು ಕೂಡಾ ಒ.ಕೆ. ಅಂದೆ. ಬೆಳಿಗ್ಗೆ ಬೇಗ 7 ಗಂಟೆಗೆ ಹೋರಡುವುದು ಎಂದ ನಾವು ಪ್ಲ್ಯಾನ್ ಮಾಡಿಕೊಂಡಿದ್ವಿ. ಆ ದಿನ ಬೆಳಿಗ್ಗೆ 3 -4 ಗಂಟೆಗೆ ನನ್ನ ಕೊನೆಯ ತಂಗಿ ನನಗೆ ಫೋನ್ ಮಾಡಿದ್ದಳು ನಾವು ಎಷ್ಟು ಗಂಟೆಗೆ ಹೊರಡುವುದು ಎಂದು ವಿಚಾರಿಸಲು. ಪಾಪ  ಅವಳಿಗೆ ಪ್ರವಾಸ ಹೋಗುವು ಖುಷಿಯಲ್ಲಿ ನಿದ್ದೆನೂ ಬಂದಿಲ್ಲ ಅಂಥ ಕಾಣ್ಸುತ್ತೆ. ನಾನು ಮಾತ್ರ ಬೆಳಿಗ್ಗೆ 6 ಗಂಟೆಗೆ ಎದ್ದು ಮೊಬೈಲ್ ನೋಡಿದ್ದು. ನಂತರ ನಾವು ಮನೆಯಿಂದ ಚಿಕ್ಕಮ್ಮನ ಮನೆಗೆ ಹೊರಟೆವು. ನಾವು ಅಲ್ಲಿಗೆ ತಲುಪುವಷ್ಟರ ಹೊತ್ತಿಗೆ ಎಲ್ಲರೂ ನಮಗಿಂತ ಮೊದಲೇ ಅಲ್ಲಿ ತಲುಪಿಯಾಗಿತ್ತು. ಸರಿ ಇನ್ನು ತಡ ಮಾಡುವುದು ಬೇಡ ಅಂಥ ಎಲ್ಲರೂ ಗಾಡಿ ಹತ್ತಿ ಹೊರಟೆವು. ನಾವು ಒಟ್ಟಿಗೆ ಎಂಟು ಜನ ಇದ್ದೆವು ಓಮ್ನಿ ಗಾಡಿಯಲ್ಲಿ, ಇನ್ನೊಬ್ಬರು ನನ್ನ ಫ್ರೆಂಡ್ ಇನ್ನು ನಮ್ಮ ಜೊತೆ ಸೇರಬೇಕಿತ್ತು. ಗಾಡಿಯಲ್ಲಿ ಹೋಗುವಾಗ ಇಷ್ಟು ಸಮಯದ ನಂತರ ನಮ್ಮ ಪ್ರವಾಸ ಯೋಜನೆ ಕೊನೆಗೂ ಕಾರ್ಯರೂಪಕ್ಕೆ ಬಂತಲ್ಲ ಅನ್ನೋ ಖುಷಿ. ಹಾಗೆಯೇ ಮ್ಯೂಸಿಕ್ ಹಾಕಿಕೊಂಡು ಪ್ರಯಾಣ ಆರಂಭಿಸಿದೆವು. ನನ್ನ ತಂಗಿಯರಲ್ಲಿ ಕೊನೆಯವಳ ಹುಟ್ಟುಹಬ್ಬ ಎರಡು ದಿನದ ಮುಂಚೆಯಷ್ಟೆ ಇತ್ತು ನಾವು ಅವಳಿಗೆ ಸರ್ಪ್ರೈಸ್ ಪ್ಲ್ಯಾನ್ ಮಾಡಿದ್ದೆವು. ಅದರಂತೆ ದಾರಿಯಲ್ಲಿ ಒಂದು ಒಳ್ಳೆಯ ಜಾಗ ಇತ್ತು ನದಿಯ ಪಕ್ಕದಲ್ಲಿ ಅಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದೆವು, ನಂತರ ನಮ್ಮ ಪ್ರಯಾಣ ಮುಂದುವರೆಯಿತು. ಆಗುಂಬೆ ಘಾಟಿಯ ತಿರುವುಗಳಿರುವ ರಸ್ತೆಯಲ್ಲಿ ನಮ್ಮ ಪಯಣ ಸಾಗಿತ್ತು. ದಾರಿಯುದ್ದಕ್ಕೂ ತಮಾಷೆ, ಚೇಷ್ಟೆ ಮಾಡುತ್ತಾ, ಮೊದಲು ನಾವು ಸನ್ ಸೆಟ್ ಪಾಯಿಂಟ್ ನಲ್ಲಿ ಇಳಿದೆವು. 

Koodlu Waterfalls

ಬೆಳಿಗ್ಗೆ ಆದದ್ದರಿಂದ ಅಲ್ಲಿ ಅಂತಹ ವಿಶೇಷತೆ ಏನೂ ಇರಲಿಲ್ಲ. ಸಂಜೆ ಆಗಿದ್ದರೆ ತುಂಬಾ ಚೆನ್ನಾಗಿತ್ತೇನೋ… ಅಲ್ಲಿ ಕೆಲವು ಪೋಟೋ ಕ್ಲಿಕ್ ಮಾಡಿ ನಂತರ ಪ್ರಯಾಣ ಮುಂದುವರಿಸಿದೆವು. ಅಷ್ಟೊತ್ತಿಗಾಗಲೇ ನಾವು ತೆಗೆದುಕೊಂಡು ಹೋಗಿದ್ದ ಕ್ಯಾಮರದ ಬ್ಯಾಟರಿ ಕೈಕೊಟ್ಟಿತ್ತು. ಇನ್ನು ಕೂಡ್ಲು ಜಲಪಾತದಲ್ಲಿ ಹೇಗೆ ಫೋಟೋ ತೆಗೆಯುವುದು ಎಂಬುದು ನಮ್ಮ ಯೋಚನೆಯಾಗಿತ್ತು. ಹೀಗೆ ಮುಂದೆ ಹೋಗುತ್ತಿದ್ದಂತೆ ಪ್ಲ್ಯಾನಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡೆವು ಕೂಡ್ಲು ತೀರ್ಥಕ್ಕೆ ಹೋಗುವ ಮೊದಲು ಕುಂದಾಧ್ರಿ ಬೆಟ್ಟಕ್ಕೆ ಹೋಗುವುದು ಎಂದು ನಿರ್ದಾರ ಆಯ್ತು. ಕುಂದಾಧ್ರಿ ಬೆಟ್ಟದ ದಾರಿ ಏರುಮುಖವಾಗಿದ್ದರಿಂದ ಆ ಏರು ರಸ್ತೆಯಲ್ಲಿ ನಮ್ಮ ಗಾಡಿ ಮುಂದೆ ಹೋಗಲು ಸ್ವಲ್ಪ ಕಷ್ಟಪಟ್ಟಿತು, ಆದ್ದರಿಂದ ನಾವು 5 ಜನ ಇಳಿದು ನಡೆದುಕೊಂಡು ಹೋಗಬೇಕಾಯಿತು. ಸ್ವಲ್ಪ ದೂರ ನಡೆದ ಮೇಲೆ ಇನ್ನು ನಡೆಯುವುದು ಕಷ್ಟ ಎಂದು ನಮಗೆ ಅರ್ಥ  ಆಗಿ ನಾವು 4 ಜನ ಸ್ವಲ್ಪಹೊತ್ತು ಅರ್ಧದಾರಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ನಿಂತೆವು ಅಷ್ಟೊತ್ತಿಗಾಗಲೇ ಉಳಿದವರು ಬೆಟ್ಟದ ತುದಿಗೆ ಮುಟ್ಟಿದ್ದರು. ಸ್ವಲ್ಪ ಹೊತ್ತು ವಿಶ್ರಮಿಸಿ ನಾವು ಕೂಡಾ ಹೊರಟೆವು. ಬೆಟ್ಟದ ಮೇಲೆ ನೋಡಲು ಅಂತಹ ವೀಕ್ಷಣೀಯ ಸ್ಥಳ ಏನೂ ಇಲ್ಲದಿದ್ದರೂ ಒಂದು ಜೈನ ಬಸದಿ ಇತ್ತು.

Kundadri Hill

 ಬೆಟ್ಟದ ಮೇಲಿಂದ 2-3 ಫೋಟೋ ಕ್ಲಿಕ್ಕಿಸಿಕೊಂಡು ನಂತರ ನಾವು ವಾಪಾಸು ಕೂಡ್ಲು ತೀರ್ಥಕ್ಕೆ ಪ್ರಯಾಣ ಬೆಳೆಸಿದೆವು. ಆಗಲೇ ಗಂಟೆ 12.30 ದಾಟಿದ್ದರಿಂದ ಇನ್ನು ಊಟ ಮುಗಿಸಿಕೊಂಡೇ ನಾವು ಮುಂದಿನ ಪ್ರಯಾಣ ಮಾಡೋಣ ಎಂದು ದಾರಿಯಲ್ಲೇ ಸಿಕ್ಕಿದ ಒಂದು ಹೋಟೆಲಿಗೆ ಹೋದೆವು. ಆ ಮಾರ್ಗದಲ್ಲಿ ಒಳ್ಳೆಯ ಸಸ್ಯಹಾರಿ ಹೋಟೆಲ್ ಅದೇ ಇರಬೇಕು ಎಂಬುದು ನನ್ನ ಭಾವನೆ. ಅಲ್ಲಿಯ ಊಟ ನನಗೆ ತುಂಬಾ ಇಷ್ಟ ಆಯ್ತು. ಹಾಗೆಯೇ ನಮ್ಮ ಕ್ಯಾಮರದ ಬ್ಯಾಟರಿಗೂ ಸ್ವಲ್ಪ ರೀಚಾರ್ಜ್ ಅಲ್ಲೇ ಮಾಡಿಸಿಕೊಂಡೆವು. ಬ್ಯಾಟರಿ ಸ್ವಲ್ಪ ಚಾರ್ಜ್ ಆಗಲಿ ಎಂದು ಆದಷ್ಟು ನಿಧಾನವಾಗಿಯೇ ಊಟ ಮಾಡಿದೆವು. ನಂತರ ಹೊರಟು ನಾವು ಕೂಡ್ಲು ತೀರ್ಥಕ್ಕೆ ಪ್ರಯಾಣ ಬೆಳೆಸಿದೆವು. ಕೂಡ್ಲು ತೀರ್ಥದ ದಾರಿ ಮೊದಲು ಸ್ವಲ್ಪ ಚೆನ್ನಾಗಿದ್ದರೂ ನಂತರ ರಸ್ತೆಯು ಸರಿಯಾದ ಅಭಿವೃದ್ಧಿ ಕಾಣದೆ ಪ್ರಯಾಣ ತುಂಬಾನೆ ಕಷ್ಟಕರವಾಗಿತ್ತು. ಕೊನೆಗೂ ನಾವು ಕೂಡ್ಲು ತೀರ್ಥದ ಮುಖ್ಯ ರಸ್ತೆ ತಲುಪಿದೆವು. ಇಲ್ಲಿಯವರೆಗೆ ಗಾಡಿಯಲ್ಲಿ ಪ್ರಯಾಣಿಸಿ, ಇನ್ನು ಕಾಲ್ನಡಿಯಲ್ಲಿ ಹೋಗಬೇಕಿತ್ತು. ಟಿಕೆಟ್ ಪಡೆದುಕೊಂಡು ನಾವು ನಮ್ಮ ಪ್ರಯಾಣ ಮುಂದುವರೆಸಿದೆವು. ದಾರಿಯುದ್ದಕ್ಕೂ ಪೋಟೋ ಕ್ಲಿಕ್ಕಿಸುತ್ತಲೇ ಹೋದೆವು ಅಷ್ಟೊಂದು ಸುಂದರವಾಗಿತ್ತು ಅಲ್ಲಿಯ ಜಾಗ. 

Koodlu Road View

ತಂಪಗಿನ ವಾತಾವರಣ ನಮಗೆ ಇನ್ನಷ್ಟು ಹಿತವೆನಿಸತೊಡಗಿತ್ತು. ಕಾಡಿನ ದಾರಿಯಾದ್ದರಿಂದ ಬಿಸಿಲಿನ ಭಯ ಇರಲಿಲ್ಲ. ನಾನಂತೂ ದಾರಿಯುದ್ದಕ್ಕೂ ವಿಡಿಯೋ ಮಾಡಿಕೊಂಡೆ ಹೋದೆ ಅಲ್ಲಿನ ದೊಡ್ಡ ದೊಡ್ಡ ಮರಗಳ ವಿಡಿಯೋ ಈಗಲೂ ನನ್ನ ಬಳಿ ಇದೆ. ಸುಮಾರು ದೂರ ಕ್ರಮಿಸಿದ ನಂತರ ನಾವು ಕೂಡ್ಲು ಜಲಪಾತ ತಲುಪಿದೆವು. ಮಳೆಗಾಲ ಅಲ್ಲದ ಕಾರಣ ಅಷ್ಟೊಂದು ನೀರು ಇರಲಿಲ್ಲ, ಆದರೆ ಜಲಪಾತ ಮಾತ್ರ ತುಂಬಾ ಸುಂದರವಾಗಿತ್ತು. ಮಳೆಗಾಲದಲ್ಲಿ ಇನ್ನೂ ಸುಂದರವಾಗಿರುತ್ತಂತೆ ಆದರೆ ಆವಾಗ ಅಲ್ಲಿಗೆ ಪ್ರವಾಸಿಗರಿಗೆ ಪ್ರವೇಶ ಇರುವುದಿಲ್ಲ ಎಂದು ನಾನು ಕೇಳಿದ್ದೆ. ನಾವು ತಲುಪುವಷ್ಟರೊಳಗೆ ಅಲ್ಲಿ ತುಂಬಾ ಜನ ಇದ್ದರು. ಅಲ್ಲಿಯ ನೀರು ಫ್ರಿಡ್ಜ್ ನಲ್ಲಿ ಇಟ್ಟ ನೀರಿನಂತೆ ತುಂಬಾನೇ ತಂಪಾಗಿತ್ತು , 

River Near Koodlu




Comments

Post a Comment