ಒಂದು ಪ್ರವಾಸದ ಕಥೆ - ಭಾಗ 1

Friends

 ಗೆಳೆಯರೊಂದಿಗೆ ಪ್ರವಾಸ ಹೋಗುವುದು ಒಂದು ಬೇರೆಯೇ ವಿಧದ ಸಂತೋಷ, ಅದರಲ್ಲೂ ಆ ಗೆಳೆಯರು ಕಸಿನ್ಸ್ ಆಗಿದ್ದರೆ ಖುಷಿ ಎರಡು ಪಟ್ಟು ಆಗುತ್ತೆ. ಯಾಕಂದ್ರೆ ಅವರು ಬೆಸ್ಟ್ ಫ್ರೆಂಡ್ಸ್ ಗಿಂತ ಒಂದು ಕೈ ಮೇಲು ಅಲ್ಲವೇ ?? ನಾನು ಹಾಗೂ  ನನ್ನ ಕಸಿನ್ಸ್ ಕೂಡಾ ಒಟ್ಟಾಗಿ ಸೇರಿ ಒಂದು ಪ್ರವಾಸ ಮಾಡುವ ಎಂದು ಯೋಜನೆ ಹಾಕಿಕೊಂಡೆವು. ಈ ಬಗ್ಗೆ ವಾಟ್ಸ್ಯಾಪ್ ನಲ್ಲಿ ಗ್ರೂಪ್ ಮಾಡಿ ಪ್ರತೀ ದಿನ ರಾತ್ರಿ ಚರ್ಚೆಗಳು ಶುರುವಾದವು. ಯಾವ ಸ್ಥಳಕ್ಕೆ ಹೋಗೋದು ? ಹೇಗೆ ಹೋಗುವುದು ? ಬಾಡಿಗೆ ವಾಹನ ಯಾರು ಹೇಳುವುದು ? ಇತ್ಯಾದಿ ಇತ್ಯಾದಿ…. ಆದರೆ ವಾಟ್ಸ್ಯಾಪ್ ಗ್ರೂಪ್ ನಲ್ಲಿ ಮೆಸೇಜ್ ಅಂದರೆ ಅದರಲ್ಲಿ ಮುಖ್ಯ ವಿಷಯಕ್ಕಿಂತ ತಮಾಷೆಯೇ ಜಾಸ್ತಿ ಇರುತ್ತಿತ್ತು. ಒಬ್ಬರು ಏನಾದರೂ ಸಲಹೆ ಹೇಳಿದ್ರೆ ಅದಕ್ಕೆ ಪ್ರತಿಯಾಗಿ ಇನ್ನೊಬ್ಬರು ತಮಾಶೆ ಮಾಡುವುದು ಹೀಗೆ ನಡೆಯುತ್ತಾ ಇರುತ್ತದೆ. ಎಲ್ಲರೂ ಒಟ್ಟಿಗೆ ಆನ್ಲೈನ್ ಇರೋದು ಕೂಡಾ ಅಪರೂಪ ಆದುದ್ದರಿಂದ ಯೋಜನೆಗಳು ಮೊಬೈಲ್ ನಲ್ಲೇ ಹೆಚ್ಚಾಗಿ ಉಳಿದು ಹೋಗುತ್ತಿದ್ದದ್ದು ಮಾಮೂಲಿಯಾಗಿತ್ತು. ಇನ್ನು ನಮ್ಮ ಗ್ರೂಪ್ ನಲ್ಲಿ ಆನ್ಲೈನ್ ಇದ್ದೂ ಗ್ರೂಪ್ ಮೆಸೇಜ್ ನೋಡದೇ ಇರುವವರು ಇದ್ದರು ಮುಖ್ಯವಾಗಿ ನಾನು. ನನ್ನ ಕಸಿನ್ ತಮ್ಮ ಮತ್ತು ನಾನು  ಪಬ್ ಜಿ ಆಡುವುದರಲ್ಲೇ ಜಾಸ್ತಿ ಕಾಲ ಕಳೆಯುತ್ತಿದ್ದೆವು. ನನ್ನ ತಂಗಿ ಈ ವಿಷಯಕ್ಕಾಗಿ ತುಂಬಾ ಸಲ ನನಗೆ ಗದರಿದ್ದೂ ಇದೆ. ಈ ರೀತಿ ಮೊಬೈಲ್ ನಲ್ಲಿ ಚರ್ಚೆ ಮಾಡಿದರೆ ಸರಿ ಬರುವುದಿಲ್ಲ ಅಂತ ಒಂದು ದಿನ ಎಲ್ಲರೂ ಭೇಟಿಯಾಗಿ ಚರ್ಚಿಸೋಣ ಅಂತ ತೀರ್ಮಾನ ಮಾಡಿಡ್ವಿ. ಅದರಂತೆ ಮಣಿಪಾಲ ಟ್ಯಾಪ್ಮಿ ಕ್ಯಾಂಪಸ್ ಬಳಿ ಇರುವ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್ ಗೆ ಚರ್ಚೆ ಮಾಡುವ ಉದ್ದೇಶದಿಂದ ಹೋದ್ವಿ. ತುಂಬಾ ಹೊತ್ತು ಮಾತನಾಡಿದ ಬಳಿಕ ಹೋಗುವ ಜಾಗ, ದಿನ, ಹೊರಡುವ ಸಮಯ ಎಲ್ಲವೂ ನಿರ್ಧರಿಸಿದೆವು. ನಂತರ ಸ್ವಲ್ಪ ಫೋಟೊ ಶೂಟ್, ಸೆಲ್ಫಿ ಅಂತ ಸುಮಾರು ಹೊತ್ತು ಅದರಲ್ಲೇ ಕಳೆದು ಹೋಯ್ತು. ನಾವು ಹಾಗೆನೇ, ಬೇಕಾದರೆ ತಿಂಡಿ ತಿನ್ನದೇ ಬಂದು ಬಿಡ್ತಿವಿ ಆದರೆ ಪೋಟೋಶೂಟ್ ಮಾಡದೇ ವಾಪಾಸು ಬರುವುದು ನಮ್ಮ ಜಾಯಮಾನದಲ್ಲೆ ಇಲ್ಲ. ಸರಿ, ಈಗ ಎಲ್ಲಾ  ನಿರ್ಧಾರವಾಗಿತ್ತು ನಾವು ಹೊರಡುವ ದಿನ ಇನ್ನೇನು ಹತ್ತಿರ ಬಂತು ಅನ್ನುವಾಗ ಕಾರಣಾಂತರಗಳಿಂದ ನಾವು ಎಲ್ಲಾ ಪ್ಲ್ಯಾನ್ ಗಳನ್ನು ಕೈಬಿಡಬೇಕಾಗಿ ಬಂತು. ಆ ದಿನ ಮಾತ್ರ ಎಲ್ಲರಿಗೂ ನಿರಾಸೆ ಆಗಿದ್ದು ಮಾತ್ರ ನಿಜ. ಈ ರೀತಿ ಕೊನೆಯ ಕ್ಷಣದಲ್ಲಿ ಎಲ್ಲಾ ತಲೆಕೆಳಗಾಗುವುದು ನಮಗೆ ಹೊಸತಲ್ಲದಿದ್ದರೂ ಈ ಸಲ ನಮ್ಮ ಯೋಜನೆಗೆ ಸ್ವಲ್ಪ ಜಾಸ್ತಿನೇ ನಿರೀಕ್ಷೆ ಇದ್ದದ್ದು ನಮ್ಮ ನಿರಾಸೆಗೆ ಕಾರಣ ಆಗಿತ್ತು. ಹೀಗೆ ನಿಂತು ಹೋದ ನಮ್ಮ ಪ್ರವಾಸದ ಪ್ರಸಂಗ ನಂತರ ವಾಟ್ಸ್ಯಾಪ್ ನಲ್ಲಿ  ಸ್ವಲ್ಪ ದಿನ ತಮಾಷೆಗೆ ಬಳಕೆ ಆಯ್ತು. ಅಲ್ಲಿಂದ ಕೆಲವು ತಿಂಗಳುಗಳವರೆಗೂ ಯಾವುದೇ ಪ್ರವಾಸದ ವಿಷಯವಾಗಲಿ ನಮ್ಮ ನಡುವೆ ಬರಲೇ ಇಲ್ಲ.  ಹೀಗಿರುವಾಗ ಕೊರೊನಾ ಬಂದು ಜಗತ್ತಿನ ಎಲ್ಲಾ ಪ್ಲ್ಯಾನ್ ಗಳೂ ಉಲ್ಟಾ ಆದವು. ಲಾಕ್ಡೌನ್  ನಿಂದ ಮನೆಯಿಂದ ಹೊರಗೆ ಬರುವುದು ಕಷ್ಟ ಆಯಿತು. ನಮ್ಮ ಪ್ರವಾಸದ ಯೋಜನೆಯೂ ಕೂಡಾ ಸ್ಟೋರ್ ರೂಮಲ್ಲಿ ಇಟ್ಟಿದ್ದ ಹಳೆಯ ಪುಸ್ತಕದಂತೆ ಉಳಿದೇ ಹೋಯಿತು.  ಇನ್ನು ಆ ಪುಸ್ತಕ ಓದುವುದು ಅನುಮಾನವೇ ಆಗಿತ್ತು. ಆದರೆ ಹಾಗಾಗಲಿಲ್ಲ ನಾವು ಮತ್ತೇ ಪ್ರವಾಸ ಹೋಗುವ ಬಗ್ಗೆ ಯೋಚನೆ ಮಾಡಿದ್ವಿ, ಈ ಬಾರಿ ಏನೇ ಆದರೂ ಸರಿ ಪ್ರವಾಸ ಹೋಗಲೇ ಬೇಕು ಅಂಥ ದೃಡ ನಿರ್ಧಾರ ಮಾಡಿದ್ವಿ. ಈ ಸಲ ಯಶಸ್ವಿಯಾಯ್ತು ಕೂಡಾ. ಅದು ಹೇಗೆ ಅಂತ ಮುಂದಿನ ಲೇಖನದಲ್ಲಿ ಬರೀತೀನಿ.

                                                                                     
                                                                                                                                           - ಕುಮಾರ್
Photo by Jordan McQueen from StockSnap

Comments