ನಾನು ನೋಡಿದ “ದೃಶ್ಯಂ 2” ಸಿನೆಮಾ

Drishyam 2 Review in  Kannada


ನಾನು ಇತ್ತೀಚಿಗೆ ನೋಡಿದ ಚಿತ್ರಗಳಲ್ಲಿ ನನಗೆ ತುಂಬಾ ಹಿಡಿಸಿದ ಚಲನಚಿತ್ರ ಅಂದರೆ ಅದು ದೃಶ್ಯಂ 2. ಈ ಚಿತ್ರದ ಬಗ್ಗೆ ನನ್ನ ಅಭಿಪ್ರಾಯ ಬರೆಯಲು ಹೊರಟಿದ್ದೇನೆ. ನಾನು ಪ್ರೊಫೆಶನಲ್ ಚಿತ್ರ ವಿಮರ್ಶಕ ಅಲ್ಲ ಹಾಗಾಗಿ ನನ್ನ ಶಬ್ದಗಳಲ್ಲಿ ಅದು ಕಂಡುಬರಬಹುದು. ನನಗೆ ಮಲಯಾಳಂ ಭಾಷೆ ಅಷ್ಟು ಚೆನ್ನಾಗಿ ಅರ್ಥ ಆಗುವುದಿಲ್ಲ ತಮಿಳು ಅರ್ಥವಾಗುತ್ತೆ ಹಾಗಾಗಿ ಸ್ವಲ್ಪ ಸಬ್ ಟೈಟಲ್ ಹಾಗೂ ಸ್ವಲ್ಪ ತಮಿಳು ಶಬ್ದಗಳ ಪರಿಚಯವಿದ್ದುದ್ದರಿಂದ ನಾನು ಸ್ವಲ್ಪ ಮಟ್ಟಿಗೆ ಚಿತ್ರದ ಕಥೆಯನ್ನು ಅರ್ಥಮಾಡಿಕೊಳ್ಳಬಲ್ಲೆ. ಸರಿ, ಚಿತ್ರವು ಮೊದಲ ಭಾಗದ ಮುಂದುವರಿದ ಅಧ್ಯಾಯವಾಗಿದ್ದು ಚಿತ್ರದ ಮೊದಲ ದೃಶ್ಯದಲ್ಲಿ 6 ವರ್ಷ ಹಿಂದಿನ ಬೇರೆ ಇನ್ನೊಂದು ಕೊಲೆ ಕೇಸಿನ ಸಣ್ಣ ತುಣುಕನ್ನು ನೀಡಲಾಗಿದೆ. ಕೊಲೆ ಮಾಡಿದ ಆ ವ್ಯಕ್ತಿ ಪೋಲಿಸರಿಂದ ತಪ್ಪಿಸಿಕೊಂಡು ಓಡುವ ಸಂದರ್ಭದಲ್ಲಿ ಜಾರ್ಜ್ ಕುಟ್ಟಿ (ಮೋಹನ್ ಲಾಲ್) ರಿಪೇರಿ ಆಗುತ್ತಿರುವ ಪೋಲಿಸ್ ಸ್ಟೇಷನ್ ನಿಂದ ಬರುವುದನ್ನು ನೋಡುತ್ತಾನೆ. ಅದಾದ ಸ್ವಲ್ಪ ಸಮಯದಲ್ಲೇ ಅವನು ಪೋಲಿಸರ ಕೈಗೆ ಸಿಕ್ಕಿಬೀಳುತ್ತಾನೆ. ಅಲ್ಲಿಂದ ಕಥೆ 6 ವರ್ಷಗಳ ನಂತರದ ವಿಷಯಗಳನ್ನು ತೋರಿಸುತ್ತದೆ. ಘಟನೆ ನಡೆದು ಆರು ವರ್ಷಗಳಾದರೂ ಕಥಾ ನಾಯಕನ ಮನೆಯವರು ಅದರ ಆಘಾತದಿಂದ ಹೊರ ಬಂದಿರುವುದಿಲ್ಲ. ನಾಯಕನ ದೊಡ್ಡ ಮಗಳು ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿ ಪೋಲಿಸರನ್ನು, ಪೋಲಿಸ್ ವಾಹನವನ್ನು ಕಂಡರೂ ಭಯ ಪಡುವ ಹಂತಕ್ಕೆ ತಲುಪಿರುತ್ತಾಳೆ. ನಾಯಕನ ಹೆಂಡತಿ (ಮೀನಾ) ಕೂಡಾ ಹಳೆಯ ಘಟನೆಗಳನ್ನು ಮರೆಯಲು ಪ್ರಯತ್ನ ಮಾಡುತ್ತಿರುತ್ತಾಳೆ. ಆಧಾರಗಳಿಲ್ಲದೆ ಕೇಸು ಮುಗಿದೇ ಹೋಗುತ್ತದೆ ಎನ್ನುವ ಸಮಯದಲ್ಲಿ ಕೆಲವೊಂದು ಘಟನೆಗಳಿಂದ ಕೇಸು ಮರು ತನಿಖೆ ಆಗುತ್ತದೆ. ಇಂಟರ್ವಲ್ ಗೆ ಮೊದಲು ಊಹಿಸಿರದ ಒಂದು ತಿರುವು ಇದೆ ಅದನ್ನು ನೋಡಲೇ ಬೇಕು ನಾನು ಅದನ್ನು ಇಲ್ಲಿ ಬರೆಯುವುದಿಲ್ಲ ಏಕೆಂದರೆ ಇನ್ನೂ ಚಿತ್ರ ನೋಡಿರದವರು ಇದ್ದರೆ ಅವರಿಗೆ ರಸಭಂಗವುಂಟಾಗುತ್ತದೆ ಆ ಕಾರಣಕ್ಕೆ. ಇಂಟರ್ವಲ್ ನಂತರ ತಿಳಿಯುವ ವಿಷಯವೇನೇಂದರೆ ಪೋಲಿಸರು ಆ ಕೇಸನ್ನು ಕ್ಲೋಸ್ ಮಾಡಿರುವುದಿಲ್ಲ ರಹಸ್ಯವಾಗಿ ಅದರ ತನಿಖೆ ನಡೆಯುತ್ತಲೇ ಇರುತ್ತದೆ. ಮಾಜಿ ಐ.ಜಿ. ಮತ್ತು ಅವರ ಗಂಡ ಅಂದರೆ ಕೊಲೆಯಾದ ಹುಡುಗನ ತಂದೆ-ತಾಯಿ ಈ ಕೇಸಲ್ಲಿ ಮತ್ತೆ ಪೋಲಿಸ್ ಅಧಿಕಾರಿಗಳೊಂದಿಗೆ ತೊಡಗಿಕೊಳ್ಳುತ್ತಾರೆ. ಹೀಗಿರುವಾಗ ಜೋಸ್ (ಚಿತ್ರದ ಮೊದಲ ದೃಶ್ಯದಲ್ಲಿ ಕೊಲೆ ಮಾಡಿ ಸಿಕ್ಕಿಬಿದ್ದ ವ್ಯಕ್ತಿ) ಜೈಲಿನಿಂದ ಶಿಕ್ಷೆ ಮುಗಿಸಿ ಬಂದಿರುತ್ತಾನೆ ಅವನು ಸಾಕ್ಷಿ ಹೇಳಿದ ಕಾರಣ ನಾಯಕ ಜಾರ್ಜ್ ಕುಟ್ಟಿ ಮತ್ತೆ ಸೆರೆಯಾಗಬೇಕಾಗುತ್ತದೆ. ಅಲ್ಲಿಂದ ನಡೆಯುವ 30-40 ನಿಮಿಷದ ದೃಶ್ಯಗಳೇ ಚಿತ್ರದ ಮುಖ್ಯ ಭಾಗ. ಈ ಕೇಸು ಮತ್ತೇ ತನಿಖೆ ಆಗುತ್ತದೆ ಎಂದು ಖಂಡಿತವಾಗಿ ನಂಬಿದ್ದ ನಾಯಕ ಅದಕ್ಕಾಗಿ ಮೊದಲೇ ತಯಾರಿದ್ದ ಎಂಬುದು ತಿಳಿಯುತ್ತದೆ. ನಾಯಕ ತನ್ನ ಹಾಗೂ ತನ್ನ ಕುಟುಂಬದ ರಕ್ಷಣೆಗೆ ಏನು ಉಪಾಯ ಮಾಡಿದ್ದ,? ಅದಕ್ಕಾಗಿ ಏನೆಲ್ಲಾ ಕಷ್ಟ ಪಟ್ಟಿದ್ದ ಕೊನೆಗೆ ಅವನು ಸಿಕ್ಕಿಬಿದ್ದನೇ ? ಅಥವಾ ಪೋಲಿಸರು ಅವನ ಉಪಾಯವನ್ನು ಊಹಿಸಿದ್ದರೇ? ಎಂಬುದನ್ನು ನೀವು ದೃಧ್ಯಂ 2 ಸಿನೆಮಾವನ್ನು ನೋಡಿದಾಗ ಗೊತ್ತಾಗುತ್ತದೆ. ಊಹೆಗೂ ನಿಲುಕದ ಅಂತ್ಯ ಈ ಸಿನೆಮಾದಲ್ಲಿದೆ ಅದನ್ನು ಚಿತ್ರ ನೋಡಿಯೇ ಆನಂದಿಸಬೇಕು. ಇಲ್ಲಿ ಮುಖ್ಯವಾಗಿ ಮೋಹನ್ ಲಾಲ್ ಅದ್ಬುತ ನಟನೆ ನೋಡುಗರನ್ನು ಸೆಳೆಯುತ್ತದೆ. ತಂದೆಯಾಗಿ ಗಂಡನಾಗಿ ಮೋಹನ್ ಲಾಲ್ ಅವರ ನಟನೆ ನನಗೆ ತುಂಬಾ ಇಷ್ಟ ಆಯ್ತು. ಮೀನಾ ಅವರ ಪಾತ್ರವೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಉಳಿದಂತೆ ಎಸ್ತರ್ ಅನಿಲ್, ಅನ್ಸಿಬಾ ಇವರುಗಳೂ ಕೂಡಾ ತಮ್ಮ ಮನೋಜ್ಞ ನಟನೆಯಿಂದ ಪ್ರೇಕ್ಷಕರ ಮನದಲ್ಲಿ ಉಳಿಯುತ್ತಾರೆ. ಒಟ್ಟಿನಲ್ಲಿ ಒಂದು ಅತ್ಯುತ್ತಮ ಸಸ್ಪೆನ್ಸ್ ಥ್ರಿಲ್ಲರ್ ಸಿನೆಮಾ ಇದು ಎಂದರೆ ತಪ್ಪಾಗಲ್ಲ. ಜಿತು ಜೋಸೆಪ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ಲಭ್ಯವಿದೆ. ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ…. 

Comments

  1. This comment has been removed by a blog administrator.

    ReplyDelete

Post a Comment